ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು(RG Kar Hospital) ಮತ್ತು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಟಿಎಂಸಿ (TMC) ವಿದ್ಯಾರ್ಥಿ ಮೋರ್ಛಾ ಮುಖಂಡನನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ.
ಟಿಎಂಸಿ ಯುವ ಮುಖಂಡ ಆಶಿಶ್ ಪಾಂಡೆ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಕುಮಾರ್ ಘೋಷ್ ಅವರಿಗೆ ನೆರವು ನೀಡಿದ ಆರೋಪ ಎದುರಿಸುತ್ತಿದ್ದು, ಇದೇ ಪ್ರಕರಣದಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ. ಅಧಿಕಾರಿಗಳ ಪ್ರಕಾರ, ಆಶೀಶ್ ಪಾಂಡೆ ಅವರು ಸಂದೀಪ್ ಘೋಷ್ಗೆ ನಿಕಟರಾಗಿದ್ದರು ಮತ್ತು ಸಂಸ್ಥೆಯಲ್ಲಿ ಹಣಕಾಸಿನ ಅಕ್ರಮಗಳನ್ನು ನಡೆಸಲು ಸಹಾಯ ಮಾಡಿದರು. ಅವರು ಸಿಬಿಐನ ನಿಗಾದಲ್ಲಿದ್ದು, ಕಳೆದ ತಿಂಗಳು ಕೇಂದ್ರ ಸಂಸ್ಥೆಯಿಂದ ಹಲವಾರು ಗಂಟೆಗಳ ಕಾಲ ವಿಚಾರಣೆಗೊಳಪಟ್ಟಿದ್ದರು.
ಪಾಂಡೆ ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೂ ಆಗಿದ್ದು, ಆಗಸ್ಟ್ನಲ್ಲಿ ಕರ್ತವ್ಯದ ವೇಳೆ ಸ್ನಾತಕೋತ್ತರ ತರಬೇತಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಹತ್ಯೆಯಾಗಿತ್ತು. ಇನ್ನು ಘೋಷ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸೆಪ್ಟೆಂಬರ್ 2 ರಂದು ಬಂಧಿಸಲಾಯಿತು. ನಂತರ, ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದ ಬಗ್ಗೆ ಸಂಸ್ಥೆಯು ಅವರನ್ನು ಕಸ್ಟಡಿಗೆ ತೆಗೆದುಕೊಂಡಿತು.
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಆಗಸ್ಟ್ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಟ್ರೈನಿ ವೈದ್ಯೆ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿರುವ ವೈದ್ಯರ ಒತ್ತಾಯಕ್ಕೆ ಕೊನೆಗೂ ಮಮತಾ ಬ್ಯಾನರ್ಜಿ ಸರ್ಕಾರ ಮಣಿದಿದೆ. ವೈದ್ಯರ ಬೇಡಿಕೆಯಂತೆ ಕೋಲ್ಕತ್ತಾ ಪೊಲೀಸ್ ಕಮಿಷನರ್ ಮತ್ತು ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಸುದ್ದಿಯನ್ನೂ ಓದಿ:Kolkata Doctors Protest: ಕೋಲ್ಕತ್ತಾದಲ್ಲಿ ಮತ್ತೆ ವೈದ್ಯರ ಮುಷ್ಕರ; ವಿವಿಧ ಬೇಡಿಕೆಗಳಿಗೆ ಆಗ್ರಹ