ಕೋಲ್ಕತ್ತ: ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸುತ್ತ ಮುತ್ತ 7 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕೋಲ್ಕತ್ತ ಪೊಲೀಸರು ನಿಷೇಧಾಜ್ಞೆ ಹೊರಡಿಸಿದ್ದಾರೆ.
ಇಂದಿನಿಂದಲೇ ನಿಷೇಧಾಜ್ಞೆ ಜಾರಿಗೆ ಬರಲಿದೆ. ಈ ಪ್ರದೇಶದಲ್ಲಿ ರ್‍ಯಾಲಿ, ಸಭೆ, ಮೆರವಣಿಗೆ, ಧರಣಿ ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸಭೆ ಸೇರದಂತೆ ನಿಷೇಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ವಿನೀತ್ ಕುಮಾರ್ ಗೋಯಲ್ ಅವರು ಶನಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ವೈದ್ಯರು ದೇಶದಾದ್ಯಂತ ಮುಷ್ಕರ ನಡೆಸಿದ್ದರಿಂದ ಶನಿವಾರ ಹಲವೆಡೆ ವೈದ್ಯಕೀಯ ಸೇವೆಯಲ್ಲಿ ಏರುಪೇರು ಉಂಟಾಗಿ ರೋಗಿಗಳು ಪರದಾಡಿದರು.
ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ಒಪಿಡಿ ಸೇವೆ (ಹೊರರೋಗಿಗಳ ವಿಭಾಗ) ಸ್ಥಗಿತಗೊಳಿಸುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ್ದ ಕರೆಗೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆಯಿತು.
ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಥಾನಿಕ ವೈದ್ಯರು ಕಳೆದ ಸೋಮವಾರ ದಿಂದಲೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಶನಿವಾರ ಖಾಸಗಿ ಆಸ್ಪತ್ರೆಗಳೂ ಬೆಂಬಲ ನೀಡಿದ್ದವು.