ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಂಬಂಧಿಸಿ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸುತ್ತ ಮುತ್ತ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಆ.31ರವರೆಗೆ ವಿಸ್ತರಿಸಲಾಗಿದೆ. ಆ.18ರಂದು ನಿಷೇಧಾಜ್ಞೆ ಹೇರಲಾಗಿತ್ತು.
ಆಸ್ಪತ್ರೆ ಪರಿಸರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸಭೆ ಸೇರುವುದನ್ನು ನಿರ್ಬಂಧಿಸಲಾಗಿದೆ. ನಿಷೇಧಾಜ್ಞೆ ವಿಸ್ತರಿಸುವ ಕುರಿತು ಕೋಲ್ಕತ್ತ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ವಿಧಿಸುವ ಮೂಲಕ ಪ್ರದೇಶದಲ್ಲಿ ಶಾಂತಿ ಕಾಪಾಡುವ ಉದ್ದೇಶವನ್ನು ಹೊಂದಲಾಗಿದೆ. ನಿಯಮ ಉಲ್ಲಂಘನೆಯಾದರೆ ಬಿಎನ್‌ಎಸ್ ಸೆಕ್ಷನ್ 223ರ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಮೊದಲು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು, ಆಸ್ಪತ್ರೆ ಕಟ್ಟಡ, ತುರ್ತು ವಿಭಾಗ, ಶುಶ್ರೂಷೆ ಕೇಂದ್ರ, ವೈದ್ಯೀಕಯ ಯಂತ್ರೋಪಕರಣ, ಪೀಠೋಪಕರಣ, ಔಷಧ ಕೇಂದ್ರ, ಹೊರರೋಗಿ ವಿಭಾಗ ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿದ್ದರು.
ಆಸ್ಪತ್ರೆಯಲ್ಲಿ ಕಿಡಿಗೇಡಿಗಳ ವಿಧ್ವಂಸಕ ಕೃತ್ಯವನ್ನು ತಡೆಯದ ಪಶ್ಚಿಮ ಬಂಗಾಳದ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.