Friday, 20th September 2024

ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 58 ಬಾಲಕಾರ್ಮಿಕರ ರಕ್ಷಣೆ

ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಸೋಮ್ ಡಿಸ್ಟಿಲರಿ ಎಂಬ ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 58 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ.

ಬಚ್‌ಪನ್‌ ಬಚಾವೋ ಆಂದೋಲನ (ಬಿಬಿಎ) ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಜಂಟಿಯಾಗಿ ಸೋಮ್ ಡಿಸ್ಟಿಲರಿ ಮೇಲೆ ಶನಿವಾರ ದಾಳಿ ನಡೆಸಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನುಂಗೊ ನೇತೃತ್ವದ ತಂಡ, ಸೋಮ್ ಡಿಸ್ಟಿಲರಿಯಿಂದ 19 ಬಾಲಕಿಯರು ಹಾಗೂ 39 ಬಾಲಕರು ಸೇರಿ ಒಟ್ಟು 58 ಮಕ್ಕಳನ್ನು ರಕ್ಷಿಸಿದೆ.

ಮಕ್ಕಳ ಕೈಗಳಲ್ಲಿ ಸುಟ್ಟ ಗಾಯಗಳಿವೆ. ರಾಸಾಯನಿಕಗಳು ಮತ್ತು ಆಲ್ಕೋಹಾಲ್‌ಗೆ ಒಡ್ಡಿಕೊಳ್ಳುವುದರಿಂದ ಗಾಯಗಳಾಗುತ್ತವೆ. ಮಕ್ಕಳನ್ನು ಪ್ರತಿದಿನ ಶಾಲಾ ಬಸ್‌ನಲ್ಲಿ ಕರೆದೊಯ್ಯುತ್ತಿದ್ದರು. 12-14 ಗಂಟೆಗಳ ಕಾಲ ಕೆಲಸ ಮಾಡಿಸುತ್ತಿದ್ದರು ಎಂದು ಬಿಬಿಎ ಹೇಳಿದೆ.

ಮುಖ್ಯಮಂತ್ರಿ ಮೋಹನ್ ಯಾದವ್, ‘ರೈಸನ್ ಜಿಲ್ಲೆಯ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದಾಗ ಬಾಲಕಾರ್ಮಿಕರ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇದು ಗಂಭೀರ ವಿಷಯವಾಗಿದೆ. ಕಾರ್ಮಿಕ, ಅಬಕಾರಿ ಮತ್ತು ಪೊಲೀಸ್ ಇಲಾಖೆಗಳಿಂದ ವಿವರವಾದ ಮಾಹಿತಿ ಪಡೆಯಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.