ನವದೆಹಲಿ: ಜೂನ್ 9 ರಂದು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ನಡೆದ ಯಾತ್ರಾರ್ಥಿಗಳ ಬಸ್ ಮೇಲಿನ ಭಯೋತ್ಪಾದನಾ ದಾಳಿ ಪ್ರಕರಣವನ್ನು ಕೇಂದ್ರ ಸರ್ಕಾರ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಿದೆ.
ರಿಯಾಸಿಯಲ್ಲಿ ಜೂ.9ರಂದು ಯಾತ್ರಾರ್ಥಿಗಳ ಸಾಗಿಸುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿತ್ತು. ಈ ಘಟನೆಯಲ್ಲಿ 7 ಮಂದಿ ಯಾತ್ರಾರ್ಥಿಗಳು ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಇದೀಗ ಈ ಪ್ರಕರಣ ತನಿಖಾ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಿದೆ. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇಲ್ಲಿ ಶಾ ಅವರು “ಭಯೋತ್ಪಾದನೆ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಸಾಧಿಸಿದ ಯಶಸ್ಸನ್ನು ಪುನರಾವರ್ತಿಸಲು” ಸೇನೆ, ಅರೆಸೇನಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ತನಿಖೆ ವಹಿಸಿಕೊಂಡ ನಂತರ ಎನ್‌ಐಎ ತನ್ನದೇ ಆದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಜೂ.9ರಂದು ಶಿವ ಖೋರಿ ದೇವಸ್ಥಾನದಿಂದ ಕಟ್ರಾದ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳುತ್ತಿದ್ದ 53 ಆಸನಗಳ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು.