Friday, 13th December 2024

“ಉದ್ಯೋಗಕ್ಕಾಗಿ ಭೂಮಿ” ಅಕ್ರಮ ಪ್ರಕರಣ: ಆರ್‌ಜೆಡಿಗೆ ಸಿಬಿಐ ಬಿಸಿ

ಪಾಟ್ನಾ: “ಉದ್ಯೋಗಕ್ಕಾಗಿ ಭೂಮಿ” ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿ ಸಿದಂತೆ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಇಬ್ಬರು ಹಿರಿಯ ನಾಯಕರ ಮನೆಗಳ ಮೇಲೆ ಕೇಂದ್ರ ತನಿಖಾ ದಳ ದಾಳಿ ನಡೆಸಿದೆ.

ಜನತಾ ದಳ (ಸಂಯುಕ್ತ) ಬಿಜೆಪಿಯಿಂದ ಬೇರ್ಪಟ್ಟು ಆರ್‌ಜೆಡಿಯೊಂದಿಗೆ ಕೈಜೋಡಿಸಿ ಎರಡು ವಾರಗಳ ನಂತರ, ಆರ್‌ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಸರಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ದಿನದಂದೇ ಈ ದಾಳಿ ಗಳನ್ನು ನಡೆಸಲಾಯಿತು.

ಆರ್‌ಜೆಡಿಯ ರಾಜ್ಯಸಭಾ ಸಂಸದ ಅಹ್ಮದ್ ಅಶ್ಫಾಕ್ ಕರೀಂ ಹಾಗೂ ಬಿಹಾರದ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಅವರ ಮನೆಗಳಿಗೆ ಸಿಬಿಐ ತಂಡಗಳು ಆಗಮಿಸಿವೆ.

ಬಿಹಾರದಲ್ಲಿ ಅಧಿಕಾರ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ತೀವ್ರ ಆಕ್ರೋಶ ಗೊಂಡಿರುವ ಕಾರಣ ಸಿಬಿಐ ಹಾಗೂ ಇತರ ಕೇಂದ್ರೀಯ ಸಂಸ್ಥೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂದು ಆರ್‌ಜೆಡಿ ವಕ್ತಾರರು ಟ್ವೀಟ್ ಮಾಡಿದ್ದರು.

“ಬಿಹಾರದಲ್ಲಿ ಉಗ್ರರೂಪ ತಾಳಿರುವ ಬಿಜೆಪಿ ಮಿತ್ರಪಕ್ಷಗಳಾದ ಸಿಬಿಐ, ಈಡಿ, ಐಟಿ ಶೀಘ್ರದಲ್ಲೇ ದಾಳಿಗೆ ಸಿದ್ಧತೆ ನಡೆಸುತ್ತಿವೆ. ಪಾಟ್ನಾದಲ್ಲಿ ಸಭೆ ಆರಂಭವಾಗಿದೆ. ನಾಳೆ ಮಹತ್ವದ ದಿನ” ಎಂದು ಆರ್ ಜೆಡಿ ವಕ್ತಾರರು ಟ್ವೀಟ್ ಮಾಡಿದ್ದರು.