Friday, 22nd November 2024

Road Accident: ಭೀಕರ ರಸ್ತೆ ಅಪಘಾತ; ಬಸ್ ಮೋರಿಗೆ ಡಿಕ್ಕಿ ಹೊಡೆದು 12 ಮಂದಿ ಸಾವು

Road Accident

ಜೈಪುರ: ರಾಜಸ್ಥಾನದ ಸಿಕರ್‌ (Sikar) ಜಿಲ್ಲೆಯಲ್ಲಿ ಮಂಗಳವಾರ (ಅ. 29) ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಸ್ ಮೋರಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ (Road Accident).

ಸಲಾಸರ್‌ (Salasar)ನಿಂದ ಆಗಮಿಸುತ್ತಿದ್ದ ಬಸ್‌ ಸಿಕರ್ ಜಿಲ್ಲೆಯ ಲಕ್ಷ್ಮಣಗಢ್ (Laxmangarh) ತಲುಪಿದ ನಂತರ ಮೋರಿಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಲಕ್ಷ್ಮಣಗಢದ ಸರ್ಕಾರಿ ಕಲ್ಯಾಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ʼʼಈವರೆಗೆ 12 ಮಂದಿ ಸಾವನ್ನಪ್ಪಿದ್ದಾರೆʼʼ ಎಂದು ಆಸ್ಪತ್ರೆಯ ಅಧೀಕ್ಷಕ ಮಹೇಂದ್ರ ಖಿಚಡ್ ಮಾಹಿತಿ ನೀಡಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿ ದುಃಖ ವ್ಯಕ್ತಪಡಿಸಿದ್ದಾರೆ ಜತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

“ಸಿಕರ್‌ನ ಲಕ್ಷ್ಮಣಗಢದಲ್ಲಿ ಸಂಭವಿಸಿದ ಬಸ್ ಅಪಘಾತ ಸುದ್ದಿ ಕೇಳಿ ನೋವಾಗಿದೆ. ಮೃತರ ಕುಟುಂಬಗಳೊಂದಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.

ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೋರಿಗೆ ಢಿಕ್ಕಿ ಹೊಡೆಯುವ ಮುನ್ನ ಬಸ್ ಹಠಾತ್ತನೆ ಚಲಿಸಿತು. ಬಸ್‌ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. ಅಪಘಾತದ ನಂತರ ಬಸ್ಸಿನೊಳಗಿದ್ದ ಪ್ರಯಾಣಿಕರು ಕಿರುಚಲು ಮತ್ತು ಕೂಗಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳದಲ್ಲಿದ್ದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದರು.

ಪ್ರಧಾನಿ ಮೋದಿ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (Prime Minister’s National Relief Fund) ತಲಾ 2 ಲಕ್ಷ ರೂ.ಗಳನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಾಳುಗಳಿಗೆ 50,000 ರೂ.ಗಳನ್ನು ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ.

10 ದಿನದ ಅಂತರದಲ್ಲಿ 2ನೇ ಘಟನೆ

ಕೇವಲ 10 ದಿನಗಳ ಅಂತರದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಎರಡನೇ ಅತಿ ದೊಡ್ಡ ಅಪಘಾತ ಇದಾಗಿದೆ. ಅ. 19ರಂದು ರಾಜಸ್ಥಾನದ ಧೋಲ್‌ಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದರು. ಬಸ್‌ ಮತ್ತು ಟೆಂಪೋ ರಿಕ್ಷಾ ನಡುವೆ ಡಿಕ್ಕಿಯಾಗಿ ಈ ದುರಂತ ನಡೆದಿತ್ತು. ಸುನಿಪುರ್‌ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದ್ದು, ಮೃತರಲ್ಲಿ 8 ಮಕ್ಕಳೂ ಸೇರಿದ್ದಾರೆ. ಸಂತ್ರಸ್ತರು ಬರೌಲಿ ಗ್ರಾಮದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು.

ಈ ಸುದ್ದಿಯನ್ನೂ ಓದಿ: Road Accident: ಜವರಾಯನ ಅಟ್ಟಹಾಸ! ಬಸ್‌-ಟೆಂಪೋ ಡಿಕ್ಕಿ; ಎಂಟು ಮಕ್ಕಳು ಸೇರಿ 11 ಜನ ಬಲಿ