Sunday, 15th December 2024

ಆಮ್ ಆದ್ಮಿ ಪಾರ್ಟಿ ‘ರೋಜ್ಗಾರ್ ಬಜೆಟ್’ ಮಂಡನೆ

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಶನಿವಾರ 75,800 ಕೋಟಿ ರೂ. ಮೌಲ್ಯದ ಬಜೆಟ್ ಅನ್ನು ಮಂಡಿಸಿದರು.

2022- 23ನೇ ಸಾಲಿನ ಈ ಬಜೆಟ್ ಕರೋನಾದಿಂದ ಕುಂಠಿತಗೊಂಡಿದ್ದ ಆರ್ಥಿಕತೆಗೆ ಪುನಶ್ಚೇತನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸಿಸೋಡಿಯ ಅವರು 69,000 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಈ ಬಾರಿಯ ಬಜೆಟ್ ಅನ್ನು ಆಮ್ ಆದ್ಮಿ ಪಾರ್ಟಿ ‘ರೋಜ್ಗಾರ್ ಬಜೆಟ್’ ಎಂದು ಕರೆದುಕೊಂಡಿದೆ.

ಪ್ರಸ್ತುತ ಮಂಡಿಸಿರುವ ಬಜೆಟ್ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮನೀಶ್ ಸಿಸೋಡಿಯಾ ಅವರು 2022-23 ನೇ ಸಾಲಿಗೆ 75,800 ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದರು.

ಇದು 2014-15ರಲ್ಲಿ ಮಂಡಿಸಿರುವ(30,940 ಕೋಟಿ ರೂ.) ಬಜೆಟ್‌ಗಿಂತ ಎರಡೂವರೆ ಪಟ್ಟು ಹೆಚ್ಚು.

“ಇದು ನಾವು ಮಂಡಿಸುತ್ತಿರುವ ಎಂಟನೇ ಬಜೆಟ್ ಆಗಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಏಳು ಬಜೆಟ್‌ಗಳು ದಿಲ್ಲಿ ಶಾಲೆಗಳನ್ನು ಉತ್ತಮಗೊಳಿಸಿವೆ. ಎಲ್ಲರಿಗೂ ವಿದ್ಯುತ್ ಲಭ್ಯವಿದೆ, ವಿದ್ಯುತ್ ಬಿಲ್‌ಗಳು ಕಡಿಮೆ ಹಾಗೂ ಮೆಟ್ರೋವನ್ನು ವಿಸ್ತರಿಸಲಾಗಿದೆ. ಈಗ ಜನರು ಸರಕಾರಿ ಕಚೇರಿಗಳನ್ನು ಸುತ್ತುವ ಅಗತ್ಯವಿಲ್ಲ” ಎಂದು ವಿಧಾನಸಭೆಯಲ್ಲಿ ಸಿಸೋಡಿಯಾ ತಿಳಿಸಿದರು.

ಕಳೆದ ಏಳು ವರ್ಷಗಳಲ್ಲಿ ಎಎಪಿ ಸರಕಾರ 1 ಲಕ್ಷದ 78 ಸಾವಿರ ಯುವಕರಿಗೆ ಖಾಯಂ ಉದ್ಯೋಗ ನೀಡಿದೆ. ಹಿಂದಿನ ಸರಕಾರಗಳು ಇದನ್ನು ಮಾಡುವಲ್ಲಿ ವಿಫಲವಾಗಿವೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.