Friday, 22nd November 2024

ವಾಣಿಜ್ಯ ಸಿಲಿಂಡರ್ ಬೆಲೆ ರೂ.250ರಷ್ಟು ಏರಿಕೆ

ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಂದಿನಿಂದ ರೂ.250 ರಷ್ಟು ಏರಿಕೆಯಾಗಿದ್ದು, 19 ಕೆ.ಜಿ. ಸಿಲಿಂಡರ್ ದರ ದೆಹಲಿಯಲ್ಲಿ 2,253 ರೂಪಾಯಿ ಆಗಿದೆ.

ಕಳೆದ ಎರಡು ತಿಂಗಳಲ್ಲಿ 19 ಕೆಜಿ ಎಲ್‍ಪಿಜಿ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್‍ಗೆ 346 ರೂಪಾಯಿಯಷ್ಟು ಹೆಚ್ಚಿಸಲಾಗಿದೆ.

ಮಾ.1ರಂದು 19 ಕೆ.ಜಿ. ವಾಣಿಜ್ಯ ಸಿಲಿಂಡರ್ ದರವನ್ನು 105 ರೂಪಾಯಿ ಹೆಚ್ಚಿಸಲಾಗಿದ್ದು, ಬಳಿಕ ಮಾ.22ರಂದು 9 ರೂಪಾಯಿ ಇಳಿಸಲಾಗಿತ್ತು. ಆದರೆ ಗೃಹಬಳಕೆಯ ಸಿಲಿಂಡರ್ ದರ ಹೆಚ್ಚಿಲ್ಲ.

ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಪೆಟ್ರೋಲ್, ಡೀಸೆಲ್ ಮತ್ತು ಎಲ್‍ಪಿಜಿ ದರ ನಿರಂತರವಾಗಿ ಹೆಚ್ಚುತ್ತಲೇ ಇದೆ. ಮಾ.22 ರಂದು ಸಬ್ಸಿಡಿಯುಕ್ತ ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಿಸಲಾಗಿತ್ತು.

ಇಂದಿನಿಂದ ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ ರೂ. 949.50, ಕೊಲ್ಕತ್ತಾದಲ್ಲಿ ರೂ. 976, ಮುಂಬೈನಲ್ಲಿ ರೂ. 949.5 ಮತ್ತು ಚೆನ್ನೈನಲ್ಲಿ ರೂ. 965.5 ಆಗಲಿದೆ.