ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಗುರುತಿಸಿಕೊಂಡಿರುವ ಹಿಂದೂ ರಾಷ್ಟ್ರೀಯವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು (RSS Marks 100 Years) ಆರ್ಎಸ್ಎಸ್ (RSS Sarsanghchalak) ಎಂದೇ ಜನಪ್ರಿಯವಾಗಿದೆ. ಈಗ ಭಾರತವನ್ನು ಆಳುತ್ತಿರುವ ಭಾರತೀಯ ಜನತಾ ಪಕ್ಷದ ಮೂಲ ಈ ಸಂಘಟನೆಯಲ್ಲಿದೆ.
ಮಾತೃಭೂಮಿಯ ಸೇವೆಗಾಗಿ ಸಂಪೂರ್ಣವಾಗಿ ಸಮರ್ಪಿತವಾಗುವ ಸ್ವಯಂ ಸೇವಕರ ರಾಜಕೀಯೇತರ ತಂಡವನ್ನು ರಚಿಸುವ ಉದ್ದೇಶದಿಂದ 1925ರಲ್ಲಿ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಈ ಸಂಘಟನೆಯನ್ನು ಸ್ಥಾಪಿಸಿದರು. ಸಂಘ ಪರಿವಾರದ ಪ್ರಮುಖ ಸಂಘಟನೆಗಳಲ್ಲಿ ಒಂದಾಗಿರುವ ಆರ್ಎಸ್ಎಸ್ ವಿಶ್ವದ ಅತೀ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಇದರ ಪ್ರಧಾನ ಕಚೇರಿ ಇದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸರಸಂಘ ಚಾಲಕರಾಗಿ ಈವರೆಗೆ ಆರು ಮಂದಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಮೋಹನ್ ಭಾಗವತ್ ಅವರು ಈ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ನಾಮ ನಿರ್ದೇಶನದ ಮೂಲಕ ಸಂಘದ ಸರಸಂಘ ಚಾಲಕರನ್ನು ಆಯ್ಕೆ ಮಾಡಲಾಗುತ್ತದೆ. ಆರ್ಎಸ್ಎಸ್ ಸ್ಥಾಪನೆಯಾದ ಬಳಿಕ ಆರು ಮಂದಿ ಸರಸಂಘ ಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಕುರಿತು ಇಲ್ಲಿದೆ ಮಾಹಿತಿ.
ಕೇಶವ ಬಲಿರಾಮ್ ಹೆಡ್ಗೆವಾರ್ (1925-1940)
1925ರಲ್ಲಿ ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಸ್ಥಾಪಿತವಾದ ಆರ್ಎಸ್ಎಸ್ನ ಮೊದಲ ಸರಸಂಘ ಚಾಲಕರಾಗಿ ಅವರೇ ಜವಾಬ್ದಾರಿ ವಹಿಸಿಕೊಂಡರು. 1925-1930ರವರೆಗೆ ಮತ್ತು ನಂತರ 1931-1940ರವರೆಗೆ ಅವರು ಕಾರ್ಯ ನಿರ್ವಹಿಸಿದರು. ಡಾಕ್ಟರ್ ಜಿ ಎಂದೇ ಕರೆಯಲ್ಪಡುತ್ತಿದ್ದ ಹೆಡ್ಗೆವಾರ್ ಹಿಂದೂ ರಾಷ್ಟ್ರೀಯತೆಯ ಸಿದ್ಧಾಂತದ ಆಧಾರದ ಮೇಲೆ ನಾಗಪುರದಲ್ಲಿ ಆರ್ಎಸ್ಎಸ್ ಸಂಘಟನೆಯನ್ನು ಸ್ಥಾಪಿಸಿದರು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಮೂಲತಃ ತೆಲಂಗಾಣದವರು. ಹದಿಮೂರು ವರ್ಷದವರಾಗಿದ್ದಾಗಲೇ ತಂದೆ- ತಾಯಿಯನ್ನು ಕಳೆದುಕೊಂಡ ಅವರು ಚಿಕ್ಕಪ್ಪನ ನೆರವಿನಿಂದ ಶಿಕ್ಷಣವನ್ನು ಮುಂದುವರಿಸಿದರು. “ವಂದೇ ಮಾತರಂ” ಹಾಡಿದ್ದಕ್ಕಾಗಿ ಶಾಲೆಯಿಂದ ಅವರನ್ನು ಹೊರಹಾಕಲಾಗಿತ್ತು. ಬಳಿಕ ಯವತ್ಮಾಲ್ನ ರಾಷ್ಟ್ರೀಯ ವಿದ್ಯಾಲಯ, ಪುಣೆ ಪ್ರೌಢಶಾಲಾ ಶಿಕ್ಷಣ ಮುಂದುವರಿಸಿದರು. ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ವೈದ್ಯರಾದ ಬಳಿಕ ನಾಗ್ಪುರಕ್ಕೆ ಮರಳಿದರು.
ಬಂಕಿಮ್ ಚಂದ್ರ ಚಟರ್ಜಿಯವರ ಬರಹಗಳಿಂದ ಪ್ರಭಾವಿತರಾಗಿದ್ದ ಅವರನ್ನು ಬಂಗಾಳದ ಅನುಶೀಲನ್ ಸಮಿತಿಗೆ ಸೇರಿಸಲಾಯಿತು. ಇದುವೇ ಆರ್ಎಸ್ಎಸ್ ಸ್ಥಾಪನೆಗೆ ಅವರನ್ನು ಪ್ರೇರೇಪಿಸಿತ್ತು. 1925ರಲ್ಲಿ ವಿಜಯದಶಮಿಯ ದಿನ ಹಿಂದೂ ಸಮುದಾಯದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುತ್ಥಾನದ ಗುರಿಯೊಂದಿಗೆ ಆರ್ಎಸ್ಎಸ್ ಅನ್ನು ಸ್ಥಾಪಿಸಿದರು. ಮುಂದೆ ಇದರ ಮಹಿಳಾ ಘಟಕ ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪನೆಗೂ ಹೆಡ್ಗೆವಾರ್ ಬೆಂಬಲ ನೀಡಿದರು.
ಆರ್ಎಸ್ಎಸ್ನ ಮೊದಲ ಸ್ವಯಂಸೇವಕರಲ್ಲಿ ಭಯ್ಯಾಜಿ ದಾನಿ, ಬಾಬಾಸಾಹೇಬ್ ಆಪ್ಟೆ, ಎಂ.ಎಸ್. ಗೋಲ್ವಾಲ್ಕರ್, ಬಾಳಾಸಾಹೇಬ್ ದೇವರಸ್ ಮತ್ತು ಮಧುಕರ್ ರಾವ್ ಭಾಗವತ್ ಸೇರಿದ್ದರು.
ಲಕ್ಷ್ಮಣ್ ವಾಸುದೇವ್ ಪರಾಂಜಪೆ (1930–1931)
ಹೆಡ್ಗೆವಾರ್ ಬಳಿಕ ಲಕ್ಷ್ಮಣ್ ವಾಸುದೇವ್ ಪರಾಂಜಪೆ ಸರಸಂಘ ಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದ ಲಕ್ಷ್ಮಣ್ ಅವರು ಹೆಡ್ಗೆವಾರ್ ಅವರು ಜೈಲಿಗೆ ಹೋದಾಗ ಕಾರ್ಯನಿರ್ವಾಹಕ ಸರಸಂಘ ಚಾಲಕರಾಗಿ ಕಾರ್ಯ ನಿರ್ವಹಿಸಿದರು. ನಾಗ್ಪುರದಲ್ಲಿ ಜನಿಸಿದ ಪರಾಂಜಪೆ ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ಬಳಿಕ ನಾಗ್ಪುರದಲ್ಲಿ ಸೇವೆ ಸಲ್ಲಿಸಿದರು.
ಎಂ.ಎಸ್. ಗೋಳ್ವಾಲ್ಕರ್ (1940–1973)
ಮಾಧವ್ ಸದಾಶಿವರಾವ್ ಗೋಳ್ವಾಲ್ಕರ್ ಅವರು ಗುರೂಜಿ ಎಂದೇ ಜನಪ್ರಿಯರಾಗಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರ ಸಂಘ ಚಾಲಕರಾಗಿದ್ದರು. ಅಖಂಡ ಭಾರತ ಸಿದ್ಧಾಂತದ ಪರಿಕಲ್ಪನೆಯಿಂದ ವಿಕಸನಗೊಂಡಿರುವ ಹಿಂದೂ ರಾಷ್ಟ್ರ ಎಂಬ ಸಾಂಸ್ಕೃತಿಕ ರಾಷ್ಟ್ರದ ಪರಿಕಲ್ಪನೆಯನ್ನು ಮುಂದಿಟ್ಟ ಮೊದಲಿಗರು ಗೋಳ್ವಾಲ್ಕರ್. ಭಾರತದ ಆರಂಭಿಕ ಹಿಂದೂ ರಾಷ್ಟ್ರೀಯವಾದಿ ಚಿಂತಕರಲ್ಲಿ ಒಬ್ಬರಾದ ಗೋಳ್ವಾಲ್ಕರ್ ಅವರ್ ನೇಷನ್ಹುಡ್ ಡಿಫೈನ್ಡ್ ಎಂಬ ಪುಸ್ತಕವನ್ನು ಬರೆದಿದ್ದಾರೆ.
ಮಧುಕರ್ ದತ್ತಾತ್ರಯ ದೇವರಸ್ (1973-1994)
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ಸರಸಂಘ ಚಾಲಕರಾದ ಮಧುಕರ್ ನಾಗ್ಪುರದಲ್ಲಿ ಜನಿಸಿದ್ದು, ಆಂಧ್ರಪ್ರದೇಶದಲ್ಲಿ ಬೆಳೆದಿದ್ದರು. ಇವರ ಕಿರಿಯ ಸಹೋದರ ಭಾವುರಾವ್ ದೇವರಸ್ ಕೂಡ ಆರ್ಎಸ್ಎಸ್ನ ಪ್ರಚಾರಕರಾಗಿದ್ದರು. ಗೋಲ್ವಾಲ್ಕರ್ ಅವರ ಮರಣದ ಬಳಿಕ ದೇವರಸ್ ಅವರು 1973ರಲ್ಲಿ ಸರ ಸಂಘ ಚಾಲಕರಾದರು. ಹಿಂದಿನ ಆರ್ಎಸ್ಎಸ್ನ ಸರಸಂಘ ಚಾಲಕರಿಗಿಂತ ಹೆಚ್ಚು ತೀವ್ರವಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಆರ್ಎಸ್ಎಸ್ ಅನ್ನು ತೊಡಗಿಸಿಕೊಳ್ಳಲು ದೇವರಸ್ ಶ್ರಮಿಸಿದರು.1994ರವರೆಗೆ ದೇವರಸ್ ಅವರು ಸರ ಸಂಘ ಚಾಲಕರಾಗಿದ್ದು, ಅನಾರೋಗ್ಯದ ಕಾರಣದಿಂದ ಅಧಿಕಾರದಿಂದ ಕೆಳಗಿಳಿದರು. ಆದರೆ ಆರ್ಎಸ್ಎಸ್ಗೆ ಅವರ ಕಾರ್ಯಗಳ ಮೂಲಕ ಹೊಸದೊಂದು ದಾರಿಯನ್ನು ತೋರಿಸಿಕೊಟ್ಟರು.
ರಾಜೇಂದ್ರ ಸಿಂಗ್ (1994–2000)
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಲ್ಕನೇ ಸರಸಂಘ ಚಾಲಕರಾದ ರಾಜೇಂದ್ರ ಸಿಂಗ್ ತೋಮರ್ ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಕೆಲಸ ಮಾಡಿದರು.1960ರ ದಶಕದ ಮಧ್ಯಭಾಗದಲ್ಲಿ ಆರ್ಎಸ್ಎಸ್ಗಾಗಿ ತಮ್ಮ ಜೀವನವನ್ನು ಮುಡಿಪಾಗಿಡಲು ಕೆಲಸವನ್ನು ತೊರೆದರು.
1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯರಾಗಿದ್ದಾಗ ಆರ್ಎಸ್ಎಸ್ ಸೇರಿದರು. ಸಿಂಗ್ ಅವರು ರಾಜಕೀಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಕೇಂದ್ರದಲ್ಲಿ ಬಿಜೆಪಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಆರ್ಎಸ್ಎಸ್ ಕೂಡ ಕಾರಣವಾಯಿತು. ಬಿಜೆಪಿ ಮತ್ತು ಆರ್ಎಸ್ಎಸ್ ತನ್ನ ಸಿದ್ಧಾಂತಗಳ ಮೂಲಕ ಒಂದಾಗಿತ್ತು. 2000ರಲ್ಲಿ ತಮ್ಮ ಅನಾರೋಗ್ಯದ ಕಾರಣದಿಂದ ಸಿಂಗ್ ಸರ ಸಂಘ ಚಾಲಕ ಹುದ್ದೆಯನ್ನು ತ್ಯಜಿಸಿದರು.
ಕೆ.ಎಸ್. ಸುದರ್ಶನ್ (2000–2009)
ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ್ 2000ರಿಂದ 2009ರವರೆಗೆ ಸಂಘದ ಐದನೇ ಸರಸಂಘ ಚಾಲಕರಾಗಿದ್ದರು.
ಆರಂಭದಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು ಹಾಕಿದರೂ ಅಂದಿನ ಎಂ.ಎಸ್. ಗೋಳ್ವಾಲ್ಕರ್ ಅವರ ಪ್ರೇರಣೆಯಿಂದ ಜವಾಬ್ದಾರಿ ವಹಿಸಿಕೊಂಡರು. ಇವರು ಕರ್ನಾಟಕದವರು. ಈ ಕುಪ್ಪಹಳ್ಳಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿದೆ.
ಆರ್ಎಸ್ಎಸ್ನೊಳಗಿನ ಕಠೋರವಾದಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡ ಸುದರ್ಶನ್, ಭಾರತೀಯ ಜನತಾ ಪಕ್ಷವನ್ನು ಅದರ ಆರ್ಥಿಕ ನೀತಿಗಳಿಗಾಗಿ ಟೀಕಿಸುತ್ತಿದ್ದರು. 2005ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಇಬ್ಬರೂ ಪಕ್ಕಕ್ಕೆ ಸರಿಯಬೇಕು ಮತ್ತು ಕಿರಿಯ ನಾಯಕತ್ವವು ಬಿಜೆಪಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಇವರು ನೀಡಿದ ಹೇಳಿಕೆ ಸಂಘ ಪರಿವಾರದಲ್ಲಿ ಬಿರುಕು ಮೂಡಿಸಿದವು. ಆದರೆ 2009ರಲ್ಲಿ ಅನಾರೋಗ್ಯದ ಕಾರಣದಿಂದ ಅಧಿಕಾರದಿಂದ ಕೆಳಗೆ ಇಳಿದರು.
ಮೋಹನ್ ಭಾಗವತ್ (2009ರಿಂದ)
ಪಶು ವೈದ್ಯರಾಗಿರುವ ಮೋಹನ್ ಮಧುಕರ್ ರಾವ್ ಭಾಗವತ್ 2009ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ 6ನೇ ಮತ್ತು ಪ್ರಸ್ತುತ ಸರಸಂಘ ಚಾಲಕರಾಗಿದ್ದಾರೆ. ಚಂದ್ರಾಪುರದಲ್ಲಿ ಮರಾಠಿ ಕರ್ಹಾಡೆ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮೋಹನ್ ಭಾಗವತ್ ಆರ್ಎಸ್ಎಸ್ ಕಾರ್ಯಕರ್ತರ ಕುಟುಂಬದಿಂದ ಬಂದವರು. ನಾಗ್ಪುರದ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನಲ್ಲಿ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆಯಲ್ಲಿ ಪದವಿ ಪಡೆದ ಅವರು 1975ರ ಅಂತ್ಯದ ವೇಳೆಗೆ ಆರ್ಎಸ್ಎಸ್ ಸೇರಿಕೊಂಡರು.
1977ರಲ್ಲಿ ಮಹಾರಾಷ್ಟ್ರದ ಅಕೋಲಾ ಪ್ರಚಾರಕರಾದ ಅವರು ಹಲವು ವರ್ಷಗಳ ಬಳಿಕ ಅಖಿಲ ಭಾರತೀಯ ಪ್ರಚಾರಕ್ ಪ್ರಮುಖ್ ಹುದ್ದೆಗೆ ಬಡ್ತಿ ಪಡೆದರು. 2000ರಲ್ಲಿ ಸುದರ್ಶನ್ ಅವರು ಸರಸಂಘ ಚಾಲಕರಾಗಿ ಆಯ್ಕೆಯಾದಾಗ ಭಾಗವತ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2009ರ ಮಾರ್ಚ್ 21ರಂದು ಸರಸಂಘ ಚಾಲಕರಾಗಿ ಆಯ್ಕೆಯಾದ ಅವರು ಕೆ.ಬಿ. ಹೆಡ್ಗೆವಾರ್ ಮತ್ತು ಎಂ.ಎಸ್. ಗೋಲ್ವಾಲ್ಕರ್ ಅವರ ಅನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾಗಿರುವ ಕಿರಿಯ ನಾಯಕರಲ್ಲಿ ಒಬ್ಬರು.
Ratan Tata Death: ಭಾರತ ರತ್ನ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರದಿಂದ ರತನ್ ಟಾಟಾ ಹೆಸರು ಪ್ರಸ್ತಾವ
2017ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ರಾಷ್ಟ್ರಪತಿ ಭವನಕ್ಕೆ ಅಧಿಕೃತವಾಗಿ ಆಹ್ವಾನಿಸಲ್ಪಟ್ಟ ಮೊದಲ ಆರ್ಎಸ್ಎಸ್ ಮುಖ್ಯಸ್ಥರಾದ ಭಾಗವತ್ 2018ರಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮೂರು ದಿನಗಳ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಮೋಹನ್ ಭಾಗವತ್ ಅವರು ಆಗಾಗ ತಮ್ಮ ಕಠಿಣ ಸಂದೇಶಗಳ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸುತ್ತಲೇ ಇರುತ್ತಾರೆ. ಪ್ರಧಾನಿ ಮೋದಿ ಅವರಿಗೂ ಆಗಾಗ ಸಲಹೆ ನೀಡುತ್ತಲೇ ಇರುತ್ತಾರೆ.