ನವದೆಹಲಿ: ರಷ್ಯಾ ಕಡೆಯಿಂದ ಹೆಚ್ಚುತ್ತಿರುವ ಆಕ್ರಮಣದ ನಡುವೆ ವಿವಿಧ ದೇಶಗಳು ಮಾಸ್ಕೋ ಮೇಲೆ ನಿರ್ಬಂಧ ಹೇರುತ್ತಿವೆ.
ಕೇರಳದ ಕೆಫೆಯೊಂದು ರಷ್ಯಾದ ಸಲಾಡ್ ಅನ್ನು ಮೆನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಘೋಷಿಸಿದೆ. ಉಕ್ರೇನ್‌ನ ಜನರೊಂದಿಗೆ ನಾವಿದ್ದೇವೆ, ನಮ್ಮ ಮೆನುವಿನಿಂದ ‘ರಷ್ಯನ್ ಸಲಾಡ್’ ಅನ್ನು ತೆಗೆದುಹಾಕಿದ್ದೇವೆ ಎಂದು ಫೋರ್ಟ್ ಕೊಚ್ಚಿಯಲ್ಲಿರುವ ಕಾಶಿ ಆರ್ಟ್ ಕೆಫೆ ಮತ್ತು ಗ್ಯಾಲರಿಯ ಹೊರಗೆ ಪೋಸ್ಟ್ ಹಾಕಲಾಗಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕೆಫೆಯ ಮಾಲೀಕ ಎಡ್ಗರ್ ಪಿಂಟೊ, ಮಾನವೀಯತೆ ಮೇಲುಗೈ ಸಾಧಿಸಬೇಕೆಂದು ಬಯಸುತ್ತೇವೆ ಮತ್ತು ರಷ್ಯಾದಿಂದ ಅಮಾಯಕ ಜನರ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸುತ್ತೇವೆ ಎಂದಿದ್ದಾರೆ. ನಾವು ಯುದ್ಧ ಬೇಡವೆಂದು ಹೇಳಲು ಬಯಸಿದ್ದೇವೆ.
ಉಕ್ರೇನ್‌ನಲ್ಲಿರುವ ಜನರಿಗೆ ನಮ್ಮ ಬೆಂಬಲ ತೋರಿಸಬಹುದು ಎಂದು ಭಾವಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.