Sunday, 15th December 2024

Sadguru Jaggi Vasudev: ಸದ್ಗುರುಗೆ ಬಿಗ್ ರಿಲೀಫ್‌! ಭುಗಿಲೆದ್ದಿರುವ ಆರೋಪಗಳಿಗೆ ಸಾಕ್ಷಿ ಇಲ್ಲ; ಸುಪ್ರೀಂ ಕೋರ್ಟ್‌ಗೆ ಪೊಲೀಸರಿಂದ ವರದಿ

Sadguru Jaggi Vasudev

ಚೆನ್ನೈ: ಸದ್ಗುರು ಜಗ್ಗಿ ವಾಸುದೇವ್‌ (Sadguru Jaggi Vasudev) ಅವರಿಗೆ ಸೇರಿದ ಕೊಯಮತ್ತೂರ್‌ನ ಇಶಾ ಫೌಂಡೇಶನ್‌ನ (Isha foundation)ನ ಆ‍ಶ್ರಮದಲ್ಲಿ ಅಕ್ರಮವಾಗಿ ಹೆಣ್ಣುಮಕ್ಕಳನ್ನು ಬಂಧನದಲ್ಲಿಟ್ಟಿರುವ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ತಮಿಳುನಾಡು ಪೊಲೀಸರು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶದಂತೆಯೇ ಈ ಬಗ್ಗೆ ಸವಿಸ್ತಾರವಾದ ವರದಿಯೊಂದನ್ನು ಕೊಯಂಬತ್ತೂರ್‌ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕೇಯನ್‌ ಸಲ್ಲಿಸಿದ್ದಾರೆ. ಪೊಲೀಸರ ವರದಿ ಪ್ರಕಾರ ಈಶಾ ಫೌಂಡೇಶನ್‌ ಆಶ್ರಮದಲ್ಲಿ ಒಟ್ಟು 217 ಬ್ರಹ್ಮಚಾರಿಗಳು ಇದ್ದಾರೆ. ಅವರಲ್ಲಿ 30ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಅವರೆಲ್ಲರೂ ತಾವು ಸ್ವ ಇಚ್ಛೆಯಿಂದಲೇ ಅಶ್ರಮದಲ್ಲಿರುವುದಾಗಿ ಹೇಳಿದ್ದಾರೆ. ಮಹಿಳೆಯರು ಇಲ್ಲಿ ಆರೋಗ್ಯಕರ ಹಾಗೂ ಸುರಕ್ಷಿತ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಶಾ ಫೌಂಡೇಶನ್‌ನಲ್ಲಿ ಕಳೆದ 15 ವರ್ಷಗಳಲ್ಲಿ ಆರು ನಾಪತ್ತೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ವರದಿಯಲ್ಲಿ ಸೇರಿಸಲಾಗಿದೆ. ಇವುಗಳಲ್ಲಿ, ಐದು ಪ್ರಕರಣಗಳು ಇತ್ಯರ್ಥಗೊಂಡಿವೆ. ಆದರೆ ಒಬ್ಬ ವ್ಯಕ್ತಿಯನ್ನು ಇನ್ನೂ ಪತ್ತೆಹಚ್ಚದ ಕಾರಣ ತನಿಖೆ ಮುಂದುವರೆಸಲಾಗಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ನಿವೃತ್ತ ಪ್ರಾಧ್ಯಾಪಕರಾದ ಡಾ. ಕಾಮರಾಜ್ ಎಂಬವರು, ತನ್ನ ಇಬ್ಬರು ಪುತ್ರಿಯರಾದ ಗೀತಾ ಕಾಮರಾಜ್ (42) ಮತ್ತು ಲತಾ ಕಾಮರಾಜ್ (39) ಅವರನ್ನು ಬಲವಂತವಾಗಿ ಫೌಂಡೇಶನ್‌ನಲ್ಲಿ ಇರಿಸಲಾಗಿತ್ತು ಎಂದು ಆರೋಪಿಸಿದ್ದರು. ಇಶಾ ಫೌಂಡೇಶನ್ ಜನರನ್ನು ಮಾನಸಿಕವಾಗಿ ನಿಯಂತ್ರಿಸಿ ಅವರನ್ನು ಸನ್ಯಾಸಿಗಳನ್ನಾಗಿ ಮಾಡಿ ಅವರ ಕುಟುಂಬದೊಂದಿಗೆ ಸಂಪರ್ಕವನ್ನು ಮುರಿದುಕೊಳ್ಳುವಂತೆ ಮಾಡುತ್ತಿದೆ ಎಂದು ಪ್ರಾಧ್ಯಾಪಕರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಇಶಾ ಫೌಂಡೇಶನ್‌ನ (Isha foundation) ಆಶ್ರಮದ ಮೇಲೆ 150 ಪೊಲೀಸರ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಫೌಂಡೇಶನ್‌ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವರದಿಯನ್ನು ಪರಿಶೀಲಿಸುವಂತೆ ಮದ್ರಾಸ್ ಹೈಕೋರ್ಟ್ಆದೇಶದ ಬೆನ್ನಲ್ಲೇ ಈ ದಾಳಿ ನಡೆಸಲಾಗಿತ್ತು.

ಮದ್ರಾಸ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಇಶಾ ಫೌಂಡೇಶನ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಇದಕ್ಕೆ ತಡೆಯಾಜ್ಞೆ ಜಾರಿಗೊಳಿಸಿತ್ತು. ಅಲ್ಲದೇ ಪ್ರಕರಣದ ಬಗ್ಗೆ ಸವಿಸ್ತಾರವಾದ ವರದಿ ಸಲ್ಲಿಸುವಂತೆ ಪೊಲೀಸ್‌ ವರಿ‍ಷ್ಠಾಧಿಕಾರಿಗೆ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಇದೀಗ ಕಾರ್ತಿಕೇಯನ್‌ ವರದಿ ಸಲ್ಲಿದ್ದು, ಡಾ. ಕಾಮರಾಜ್‌ ಅವರ ಆರೋಪದ ಬಗ್ಗೆ ಅವರ ಹೆಣ್ಣು ಮಕ್ಕಳನ್ನು ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ ತಾವು ಸುಶಿಕ್ಷಿತರಾಗಿದ್ದು, ತಮ್ಮ ಇಚ್ಛೆಯಿಂದಲೇ ಆಶ್ರಮದಲ್ಲಿರುವುದಾಗಿ ಹೇಳಿದ್ದಾರೆ. ಇನ್ನು ಆ ಇಬ್ಬರು ಹೆ‍ಣ್ಣು ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆ. ತಾವು ಇಚ್ಛೆಯಿಂದಲೇ ಈಶಾ ಫೌಂಡೇಶನ್‌ನಲ್ಲಿ ಸನ್ಯಾಸ ಜೀವನ ಸಾಗಿಸುತ್ತಿದ್ದೇವೆ ಎಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Chikkaballapur News: ಪರಂಪರೆ ಉಳಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ