Thursday, 12th December 2024

ಡಿ.ಎಸ್. ನಾಗಭೂಷಣ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಈ ಸಾಲಿನ ವರ್ಷದ ಪುಸ್ತಕ ಪ್ರಶಸ್ತಿಗೆ, ಕನ್ನಡದ ಲೇಖಕ ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿ ಆಯ್ಕೆಯಾಗಿದೆ. ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆ ಮಿಯು ಗುರುವಾರ ಪ್ರಕಟಿಸಿದೆ.

ಬಸು ಬೇವಿನಗಿಡದ ಅವರು ಮಕ್ಕಳಿಗಾಗಿ ಬರೆದಿರುವ ‘ಓಡಿ ಹೋದ ಹುಡುಗ’ ಕಾದಂಬರಿ ‘ಬಾಲ ಪುರಸ್ಕಾರ’ಕ್ಕೆ ಆಯ್ಕೆಯಾಗಿದೆ. ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರ ‘ತೊಗಲ ಚೀಲದ ಕರ್ಣ’ ಮಹಾಕಾವ್ಯಕ್ಕೆ ‘ಯುವ ಪುರಸ್ಕಾರ’ ಲಭಿಸಿದೆ.

ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತು ಯುವ, ಬಾಲ ಪುರಸ್ಕಾರಗಳು ಐವತ್ತು ಸಾವಿರ ರೂಪಾಯಿ ಜೊತೆಗೆ ಸನ್ಮಾನವನ್ನು ಒಳಗೊಂಡಿರುತ್ತವೆ.

ಸಾಹಿತಿ ಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಅವರು ಯುವ ಸಾಹಿತ್ಯ ಪ್ರಶಸ್ತಿಯ ತೀರ್ಪುಗಾರರಾಗಿದ್ದರು. ಟಿ.ಪಿ. ಅಶೋಕ, ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್ ದಿವಾಕರ ಅವರು ಬಾಲ ಸಾಹಿತ್ಯ ಪ್ರಶಸ್ತಿ ವಿಭಾಗದ ತೀರ್ಪುಗಾರರಾಗಿದ್ದರು.

ಪ್ರಮುಖ ಕೃತಿ ಆಯ್ಕೆಯ ತೀರ್ಪುಗಾರರಾಗಿ ಬೊಳುವಾರ್ ಮಹಮ್ಮದ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು. ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕ ಸರಜೂ ಕಾಟ್ಕರ್ ಉಸ್ತುವಾರಿಯಲ್ಲಿ ಪುಸ್ತಕ ಆಯ್ಕೆ ಪ್ರಕ್ರಿಯೆ ನಡೆಯಿತು. ರಾಷ್ಟ್ರ ರಾಜಧಾನಿಯಲ್ಲಿ ಫೆಬ್ರುವರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.