ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್(Bishnoi Gang) ಹಿಟ್‌ಲಿಸ್ಟ್‌ನಲ್ಲಿರುವ ನಟ ಸಲ್ಮಾನ್ ಖಾನ್(Salman Khan) ಅವರ ಹತ್ಯೆಗೆ ಬರೋಬ್ಬರಿ ₹ 25 ಲಕ್ಷದ ಸುಪಾರಿ ಪಡೆದಿರುವ ವಿಚಾರ ಇದೀಗ ಚಾರ್ಜ್‌ಶೀಟ್(Chargesheet)ನಲ್ಲಿ ಬಯಲಾಗಿದೆ. ಬಿಷ್ಣೋಯ್ ಗ್ಯಾಂಗ್ ವಿರುದ್ಧ ನವಿ ಮುಂಬೈ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಐದು ಜನ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ಈ ಐವರು ಆರೋಪಿಗಳು ಸಲ್ಮಾನ್ ಖಾನ್ ಹತ್ಯೆಗೆ ಪಾಕಿಸ್ತಾನದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಕೆ 47, ಎಕೆ 92 ಮತ್ತು ಎಂ 16 ಮತ್ತು ಟರ್ಕಿ ನಿರ್ಮಿತ ಜಿಗಾನಾ ಆಯುಧವನ್ನು ಖರೀದಿಸಲು ಸಿದ್ಧತೆ ನಡೆಸಿತ್ತು. ಇದೇ ಶಸ್ತ್ರಾಸ್ತ್ರಗಳಿಂದ ಈ ಗ್ಯಾಂಗ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿತ್ತು. ಇನ್ನು ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ನೇಮಿಸಿಕೊಂಡಿದ್ದರು, ಅವರೆಲ್ಲರೂ ಪುಣೆ, ರಾಯಗಡ, ನವಿ ಮುಂಬೈ, ಥಾಣೆ ಮತ್ತು ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಮಾರು 60 ರಿಂದ 70 ಜನರು ಸಲ್ಮಾನ್ ಖಾನ್ ಅವರ ಚಲನವಲನವನ್ನು ಗಮನಿಸುತ್ತಿದ್ದರು, ವಿಶೇಷವಾಗಿ ಅವರ ಬಾಂದ್ರಾ ಮನೆ, ಪನ್ವೆಲ್ ಫಾರ್ಮ್‌ಹೌಸ್ ಮತ್ತು ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ಅವರ ಓಡಾಟದ ಮೇಲೆ ನಿಗಾ ಇರಿಸಲಾಗಿತ್ತು. ಅಷ್ಟೇ ಅಲ್ಲದೇ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಆಗಸ್ಟ್ 2023 ಮತ್ತು ಏಪ್ರಿಲ್ 2024 ರ ನಡುವೆ ಸಂಚು ರೂಪಿಸಲಾಗಿತ್ತು.
ನಿನ್ನೆಯಷ್ಟೇ ಸಲ್ಮಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಪಾಣಪತ್‌ನಿಂದ ಪ್ರಮುಖ ಆರೋಪಿ ಸುಖ್ಖಾ ಸೇರಿದಂತೆ ಐವರನ್ನು ಅರೆಸ್ಟ್ ಮಾಡಲಾಗಿತ್ತು. ಸಲ್ಮಾನ್ ಖಾನ್ ಬಿಗಿ ಭದ್ರತೆ ಮತ್ತು ಬುಲೆಟ್ ಪ್ರೂಫ್ ವಾಹನಗಳ ಕಾರಣದಿಂದಾಗಿ ಈ ಕೃತ್ಯಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೇ ಬೇಕು. ಹೀಗಾಗಿ ಸುಖ್ಖಾ ಪಾಕಿಸ್ತಾನ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿ ಡೋಗರ್ ಜತೆ ವೀಡಿಯೊ ಕರೆ ಮೂಲಕ ಸಂಪರ್ಕಿಸಿದ್ದ. AK-47 ಮತ್ತು ಇತರ ಸುಧಾರಿತ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿದ್ದ. ಡೋಗರ್ ಶಸ್ತ್ರಾಸ್ತ್ರಗಳನ್ನು ಪೂರೈಸಲು ಒಪ್ಪಿಕೊಂಡಿದ್ದ. ಇದಕ್ಕಾಗಿ ಶೇ.50ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಿದ್ದ ಎಂಬುದು ತಿಳಿದುಬಂದಿದೆ.
ಇನ್ನು ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ಹೊಣೆ ಹೊತ್ತುಕೊಂಡಿರುವ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಯಾರೂ ಸಹಾಯ ಮಾಡುತ್ತಾರೋ ಅವರಿಗೆ ಇದೇ ಗತಿ ಎಂದು ಎಚ್ಚರಿಕೆ ನೀಡಿದೆ.
ಈ ಸುದ್ದಿಯನ್ನೂ ಓದಿ: India Canada row: ಬಿಷ್ಣೋಯ್ ಗ್ಯಾಂಗ್ ಜೊತೆ ಭಾರತದ ಏಜೆಂಟ್‌ಗಳಿಗೆ ನಂಟು; ಕೆನಡಾ ಗಂಭೀರ ಆರೋಪ