Tuesday, 5th November 2024

Salman Khan: ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ಕರ್ನಾಟಕ ಮೂಲದ ಯುವಕ ಅರೆಸ್ಟ್‌

SALMAN KHAN

ನವದೆಹಲಿ: ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ(Lawrence Bishnoi) ಸಹೋದರ ಎಂದು ಹೇಳಿಕೊಂಡು ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ (Salman Khan) ಜೀವ ಬೆದರಿಕೆ ಹಾಕಿದ್ದ ಕಿಡಿಗೇಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ಕರ್ನಾಟಕ ಮೂಲದ ವಿಕ್ರಮ್‌(32) ಎಂದು ಗುರುತಿಸಲಾಗಿದೆ.

ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಐದು ಕೋಟಿ ಬೇಡಿಕೆ ಹಾಗೂ ದೇವಸ್ಥಾನಕ್ಕೆ ಬಂದು ಸಲ್ಮಾನ್‌ ಕ್ಷಮೆ ಕೇಳಬೇಕೆಂದು ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ (Mumbai traffic control room) ಸಂದೇಶ ಕಳುಹಿಸಿದ್ದ. ಸಲ್ಮಾನ್‌ ಜೀವಂತವಾಗಿರಬೇಕೆಂದರೆ ಆತ ನಮಗೆ ಐದು ಕೋಟಿ ನೀಡಬೇಕು ಹಾಗೂ ದೇವಸ್ಥಾನಕ್ಕೆ ಬಂದು ನಮ್ಮ ಸಮಾಜದವರೊಂದಿಗೆ ಕ್ಷಮೆ ಕೇಳಬೇಕು. ಅವನು ಹಾಗೆ ಮಾಡದೆ ಇದ್ದಲ್ಲಿ ಅವನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ

ಬೆದರಿಕೆ ಸಂದೇಶದ ತನಿಖೆ ನಡೆಸಿದ ಮುಂಬೈನ ಅಪರಾಧ ವಿಭಾಗದ ಪೊಲೀಸರು, ಬೆದರಿಕೆ ಹಾಕಿದವರಿಗಾಗಿ ಶೋಧ ನಡೆಸುತ್ತಿದ್ದರು. ಈ ವೇಳೆ ಈ ಬೆದರಿಕೆ ಹಾಕಿರುವುದು ಕರ್ನಾಟಕ ಮೂಲದ ವಿಕ್ರಂ ಎಂಬುದು ಬಯಲಾಗಿದೆ. ತಕ್ಷಣ ಪೊಲೀಸರು ಆತನನ್ನು ಅರೆಸ್ಟ್‌ ಮಾಡಿ, ಮುಂಬೈಗೆ ಕರೆತಂದಿದ್ದಾರೆ. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್‌ಗೆ ಕೊಲೆ ಬೆದರಿಕೆ ಕರೆಗಳು ಮತ್ತೆಮತ್ತೆ ಬರುತ್ತಿವೆ. ಈ ಮೊದಲು ವ್ಯಕ್ತಿಯೊಬ್ಬ ತಾನು ಲಾರೆನ್ಸ್‌ ಬಿಷ್ಣೋಯ್‌ ಎಂದು ಬೆದರಿಕೆ ಹಾಕಿ ಐದು ಕೋಟಿ ಬೇಡಿಕೆ ಇಟ್ಟಿದ್ದ. ಬೆದರಿಕೆ ಹಾಕಿದವನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಆತ ಮುಂಬೈನಲ್ಲಿ ಟ್ಯಾಟೂ ಹಾಕುತ್ತಿದ್ದ ಎಂದು ತಿಳಿದು ಬಂದಿದೆ. ಅದಾದ ಕೆಲ ದಿನಗಳ ನಂತರ ಮತ್ತೊಬ್ಬ ವ್ಯಕ್ತಿ ಸಲ್ಮಾನ್‌ ಖಾನ್ ಕೊಲ್ಲುವುದಾಗಿ ಹೇಳಿ ಎರಡು ಕೋಟಿ ಬೇಡಿಕೆ ಇಟ್ಟಿದ್ದ. ಬೆದರಿಕೆ ಹಾಕಿದವನು ಜಾರ್ಖಂಡ್‌ನ ವ್ಯಕ್ತಿ ಎಂದು ತಿಳಿದು ಬಂದಿದೆ. ಜೆಮ್‌ಶೆಡ್‌ಪುರದಲ್ಲಿ ತರಕಾರಿ ಮಾರಾಟಮಾಡುತ್ತಿದ್ದ ಎಂದು ಗೊತ್ತಾಗಿದೆ. ಮುಂಬೈ ಪೊಲೀಸರು ಜೆಮ್‌ಶೆಡ್‌ಪುರದ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮತ್ತೊರ್ವ ಆರೋಪಿ ಮುಂಬೈನಲ್ಲಿ ಅರೆಸ್ಟ್‌

ಸಲ್ಮಾನ್ ಖಾನ್ ಮತ್ತು ಹತ್ಯೆಗೀಡಾದ ರಾಜಕಾರಣಿ ಬಾಬಾ ಸಿದ್ದಿಕಿ ಅವರ ಪುತ್ರ ಜೀಶಾನ್ ಸಿದ್ದಿಕಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ ಆರೋಪದ ಮೇಲೆ 20 ವರ್ಷದ ವ್ಯಕ್ತಿಯನ್ನು ನೋಯ್ಡಾದ ಸೆಕ್ಟರ್ 39 ರಿಂದ ಬಂಧಿಸಲಾಗಿದೆ. ಮುಂಬೈ ಪೊಲೀಸರು ಮೊಹಮ್ಮದ್ ತಯ್ಯಬ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಅವರನ್ನು ಟ್ರಾನ್ಸಿಟ್ ರಿಮಾಂಡ್ ಗೆ ಕರೆದೊಯ್ದಿದ್ದರು.

ಈ ಸುದ್ದಿಯನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ! 5 ಕೋಟಿ ರೂ.ಗೆ ಬೇಡಿಕೆ