Friday, 22nd November 2024

Salman Khan: ಸಿನಿಮೀಯ ಶೈಲಿಯ ಕಾರ್ಯಾಚರಣೆ; ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಅರೆಸ್ಟ್‌

Salman Khan

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ (Lawrence Bishnoi) ಜೀವ ಬೆದರಿಕೆ ಹಾಕಿದೆ. ಈ ಮಧ್ಯೆ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ ಸುಖ್ಬೀರ್ ಬಲ್ಬೀರ್ ಸಿಂಗ್ ಅಲಿಯಾಸ್ ಸುಖಾ (Sukhbir Balbir Singh alias Sukha)ನನ್ನು ನವೀ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬುಧವಾರ (ಅಕ್ಟೋಬರ್‌ 16) ರಾತ್ರಿ ಪಾಣಿಪತ್ ಹೋಟೆಲ್ ಈತನನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ಮೂಲಕ ಸುಖ್ಬೀರ್ ಬಲ್ಬೀರ್ ಸಿಂಗ್‌ನನ್ನು ಆಕರ್ಷಿಸಿ ಆತನನ್ನು ಪೊಲೀಸರು ಬಲೆಗೆ ಕಡೆವಿದ್ದಾರೆ.

ಈ ವರ್ಷದ ಆರಂಭದಲ್ಲಿ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಗುಂಪಿನಲ್ಲಿ ಸುಖಾ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಾಕಿಸ್ತಾನದಿಂದ ಕಳ್ಳ ಸಾಗಣೆ ಮೂಲಕ ಬಂದೂಕುಗಳನ್ನು ತರಿಸಿಕೊಂಡು ಸಲ್ಮಾನ್‌ ಖಾನ್ ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ಯಾಂಗ್‌ನ ನಾಯಕತ್ವದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಸುಖಾ ಪಾಕಿಸ್ತಾನ ಮೂಲದ ಡೋಗರ್ ಎಂಬ ಅಪರಾಧಿಯೊಂದಿಗೆ ಸಂಪರ್ಕದಲ್ಲಿದ್ದ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ವರ್ಷಾರಂಭದಲ್ಲಿ ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್‌ ಖಾನ್ ಅವರ ನಿವಾಸದ ಮೇಲೆ ದಾಳಿ ನಡೆದ ನಂತರ ತಪ್ಪಿಸಿಕೊಂಡಿದ್ದ ಸುಖಾನನ್ನು ಸೆರೆ ಹಿಡಿಯಲು ಪೊಲೀಸರು 3 ತಿಂಗಳಿನಿಂದ ಯೋಜನೆ ರೂಪಿಸಿದ್ದರು.

ಸುಖಾ ಸೆರೆ ಸಿಕ್ಕಿದ್ದು ಹೇಗೆ?

ಸುಖಾ ಸೆರೆ ಸಿಕ್ಕಿದ್ದು ಸಿನಿಮೀಯ ರೀತಿಯಲ್ಲಿ ಎನ್ನುವುದು ವಿಶೇಷ. ಆತನ ಪತ್ತೆಗಾಗಿ ಪೊಲೀಸರು ವಿಶಿಷ್ಟ ತಂತ್ರವನ್ನು ಜಾರಿಗೊಳಿಸಿದ್ದರು. ಪೊಲೀಸರ ಪರವಾಗಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಸುಖಾನೊಂದಿಗೆ ಸ್ನೇಹ ಬೆಳೆಸಿದ್ದರು. ಸಂವಹನ ನಡೆಸುತ್ತ ಇಬ್ಬರು ಪರಸ್ಪರ ಸಂಪರ್ಕದಲ್ಲಿದ್ದರು. ಅಂತಿಮವಾಗಿ ಕುಟುಕು ಕಾರ್ಯಾಚರಣೆಗೆ ಪೊಲೀಸರು ನಿರ್ಧರಿಸಿದರು. ಅದರಂತೆ ಅಕ್ಟೋಬರ್‌ 16ರಂದು ಯುವತಿ ಸುಖಾಗೆ ಕರೆ ಮಾಡಿ ತಾನು ಪಾಣಿಪತ್‌ನ ಹೋಟೆಲ್‌ನಲ್ಲಿ ತಂಗಿರುವುದಾಗಿ ತಿಳಿಸಿದ್ದರು. ಜತೆಗೆ ತಾನು ತುಂಬಾ ಕುಡಿದಿರುವುದಾಗಿಯೂ ಸುಳ್ಳು ಹೇಳಿದ್ದರು. ಲೊಕೋಷನ್‌ ಕಳುಹಿಸಿ ಅಲ್ಲಿಗೆ ಬರಲು ಕೋರಿದ್ದರು ಎಂದು ದೈನಿಕ್‌ ಜಾಗರಣ್‌ ವರದಿ ಮಾಡಿದೆ.

ಆರಂಭದಲ್ಲಿ ಅನುಮಾನಗೊಂಡ ಸುಖಾ ತನ್ನನ್ನು ಬಂಧಿಸಲು ಸಂಚು ಮಾಡಲಾಗಿದ್ಯಾ ಎಂದು ಪ್ರಶ್ನಿಸಿದ್ದ. ಆದಾಗ್ಯೂ ಆತನ ಸಂಶಯವನ್ನು ನಿವಾರಿಸಿದ ಆಕೆ ನಂಬಿಕೆ ಬರುವಂತೆ ವರ್ತಿಸಿದ್ದರು. ಬಳಿಕ ಆತ ಹೋಟೆಲ್‌ಗೆ ಬರಲು ಒಪ್ಪಿಗೆ ಸೂಚಿಸಿದ್ದ. ಇದೇ ವೇಳೆ ಮುಂಬೈ ಪೊಲೀಸರು ಸಜ್ಜಾಗಿ ಮರೆಯಲ್ಲಿ ಅವಿತು ನಿಂತಿದ್ದರು. ಇಬ್ಬರು ಮಾತನಾಡುತ್ತ ಕುಳಿತಿದ್ದಾಗ ಪೊಲೀಸರು ಏಕಾಏಕಿ ದಾಳಿ ನಡೆಸಿ ಸುಖಾನನ್ನು ಬಂಧಿಸಿದ್ದಾರೆ ಎಂದು ವರದಿ ವಿವರಿಸಿದೆ. ಸದ್ಯ ಆತನ ಬಂಧನ ತನಿಖೆಗೆ ಮಹತ್ವದ ತಿರುವು ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Salman Khan: 5 ಕೋಟಿ ರೂ ಕೊಡಿ… ಇಲ್ಲವೇ ಸಿದ್ದಿಕಿಗಿಂತಲೂ ಭೀಕರವಾಗಿ ಹತ್ಯೆ ಮಾಡ್ತೇವೆ; ಸಲ್ಮಾನ್‌ ಖಾನ್‌ಗೆ ಮತ್ತೆ ಬೆದರಿಕೆ