Thursday, 12th December 2024

Baba Siddique : ಬಹುಕಾಲದ ಗೆಳೆಯ ಬಾಬಾ ಸಿದ್ದಿಕಿಗೆ ಅಂತಿಮ ನಮನ ಸಲ್ಲಿಸುವಾಗ ಕಣ್ಣೀರು ಹಾಕಿದ ಸಲ್ಮಾನ್ ಖಾನ್‌

Baba Siddique

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್‌ಸಿಪಿ (ಅಜಿತ್‌ ಪವಾರ್ ಬಣ) ನಾಯಕ ಬಾಬಾ ಸಿದ್ದಿಕಿ (Baba Siddique) ಅವರ ಅಂತಿಮ ದರ್ಶನದ ವೇಳೆ ಅವರ ಬಹುಕಾಲದ ಆಪ್ತ ಹಾಗೂ ಬಾಲಿವುಡ್ ಸ್ಟಾರ್ ಸಲ್ಮಾನ್ ಕಣ್ಣೀರು ಹಾಕಿರದರು. ಅದರ ವಿಡಿಯೊಗಳನ್ನು ಪಾಪರಾಜಿಗಳು ಅಪ್‌ಲೋಡ್ ಮಾಡಿದ್ದಾರೆ.

ಶನಿವಾರ ರಾತ್ರಿ ಬಾಬಾ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಗುಂಡಿನ ದಾಳಿ ನಡೆಸಿದ್ದರು. ಲಿಲಾವತಿ ಆಸ್ಪತ್ರೆಗೆ ದಾಖಲಿಸಿದ ಹೊರತಾಗಿಯೂ ಅವರು ಮೃತಪಟ್ಟಿದ್ದರು. ಘಟನೆ ತಿಳಿದ ತಕ್ಷಣ ಬಾಲಿವುಡ್ ನಟ ಮತ್ತು ಆಪ್ತ ಸ್ನೇಹಿತ ಸಲ್ಮಾನ್ ಖಾನ್ ಆಸ್ಪತ್ರೆಗೆ ಧಾವಿಸಿ ಸಿದ್ದಿಕಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಅಂತೆಯೇ ಭಾನುವಾರ ಸಂಜೆ ಸಿದ್ದೀಕ್ ಅವರ ನಿವಾಸಕ್ಕೆ ಆಗಮಿಸಿದ ಸಲ್ಮಾನ್‌ ಅಂತಿಮ ಗೌರವ ಸಲ್ಲಿಸಿದರು. ಅಲ್ಲಿಂದ ಮರಳುವ ವೇಳೆ ಸಲ್ಮಾನ್ ತೇವಗೊಂಡ ಕಣ್ಣುಗಳೊಂದಿಗೆ ನಿವಾಸದಿಂದ ಹೊರಡುವ ಭಾವನಾತ್ಮಕ ಕ್ಷಣವನ್ನು ಸೆರೆಯಾಗಿದೆ. ಅದರ ವೀಡಿಯೊ ವೈರಲ್ ಆಗಿದೆ.

ಜನಪ್ರಿಯ ಪಾಪರಾಜೋ ಸ್ನೇಹ್ ಝಾಲಾ ಹಂಚಿಕೊಂಡಿರುವ ವೀಡಿಯೊದಲ್ಲಿ, ಸಲ್ಮಾನ್ ಖಾನ್ ಕಪ್ಪು ರೇಂಜ್ ರೋವರ್‌ನಲ್ಲಿ ಬಾಬಾ ಸಿದ್ದಿಕಿ ಅವರ ನಿವಾಸಕ್ಕೆ ಬಿಗಿ ಭದ್ರತೆಯಲ್ಲಿ ಆಗಮಿಸುತ್ತಿರುವುದು ಸೆರೆ ಹಿಡಿದಿದ್ದಾರೆ. ಸಲ್ಮಾನ್ ಅವರ ಕಾರು ನಿವಾಸ ಪ್ರವೇಶಿಸಿದ ಕ್ಷಣವನ್ನು ವೀಡಿಯೊದಲ್ಲಿ ಸೆರೆ ಹಿಡಿಯಲಾಗಿದೆ. ಬಾಬಾ ಸಿದ್ದಿಕಿ ಅವರ ನಿವಾಸದಿಂದ ನಿರ್ಗಮಿಸುವ ಮತ್ತೊಂದು ವೀಡಿಯೊದಲ್ಲಿ, ಸಲ್ಮಾನ್ ಖಾನ್ ಹೊರಗೆ ನೆರೆದಿದ್ದ ದೊಡ್ಡ ಜನಸಮೂಹದ ನಡುವೆ ಹೋಗುವಾಗ ಭಾವುಕರಾಗಿ ಕಣ್ಣೀರು ಹಾಕಿದರು.

ಇದನ್ನೂ ಓದಿ: Baba Siddique : ದಸರಾ ಪಟಾಕಿ ಸಿಡಿಸುತ್ತಿದ್ದ ವೇಳೆ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕ್ಕಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಇದಕ್ಕೂ ಮುನ್ನ ಖಾನ್ ಕುಟುಂಬದ ಸದಸ್ಯರು ಮುಂಬೈನಲ್ಲಿರುವ ಬಾಬಾ ಸಿದ್ದಿಕಿ ಅವರ ಮನೆಗೆ ಆಗಮಿಸಿ ಗೌರವ ಸಲ್ಲಿಸಿದರು. ಸಲ್ಮಾನ್ ಗೆಳತಿ ಯೂಲಿಯಾ ವಂಟೂರ್, ಸೊಹೈಲ್ ಖಾನ್, ಶುರಾ ಖಾನ್, ಅರ್ಪಿತಾ ಖಾನ್ ಶರ್ಮಾ ಮತ್ತು ಅಲ್ವಿರಾ ಅಗ್ನಿಹೋತ್ರಿ ಅವರೊಂದಿಗೆ ಸಿದ್ದಿಕ್ ನಿವಾಸದ ಕಡೆಗೆ ನಡೆದುಕೊಂಡು ಹೋಗಿದ್ದಾರೆ. ಅವರೊಂದಿಗೆ ಬಿಜೆಪಿ ನಾಯಕಿ ಶೈನಾ ಎನ್‌ಸಿ ಕೂಡ ಇದ್ದರು. ಎಲ್ಲರೂ ಸಾಂಪ್ರದಾಯಿಕ ಗೌರವದ ಸಂಕೇತವಾದ ಬಿಳಿ ಉಡುಪು ಧರಿಸಿದ್ದರು.

ಕಳೆದ ರಾತ್ರಿ ಸಿದ್ದಿಕ್ ನಿಧನದ ಆಘಾತಕಾರಿ ಸುದ್ದಿಯ ನಂತರ, ಸಲ್ಮಾನ್ ಖಾನ್ ಬಿಗ್ ಬಾಸ್ 18 ರ ಚಿತ್ರೀಕರಣ ನಿಲ್ಲಿಸಿ ಆಸ್ಪತ್ರೆಗೆ ಧಾವಿಸಿದ್ದರು. ಅಲ್ಲಿ ಅವರು ಸಿದ್ದಿಕ್ ಅವರ ದುಃಖಿತ ಕುಟುಂಬವನ್ನು ಭೇಟಿಯಾಗಿದ್ದರು. ಸಲ್ಮಾನ್ ವರ್ಷಗಳಿಂದ ಸಿದ್ದೀಕ್ ಅವರ ಇಫ್ತಾರ್ ಕೂಟಗಳಿಗೆ ಹಾಜರಾಗುತ್ತಿದ್ದರು. ವರದಿಗಳ ಪ್ರಕಾರ, ಸಲ್ಮಾನ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.