Wednesday, 4th December 2024

Sambhal violence: ಹಿಂಸಾಚಾರ ಪೀಡಿತ ಸಂಭಾಲ್‌ ಭೇಟಿಗೆ ಮುಂದಾದ ರಾಹುಲ್‌-ಪ್ರಿಯಾಂಕಾಗೆ ಗಡಿಯಲ್ಲೇ ತಡೆ- ಕಾಂಗ್ರೆಸ್‌ ಕೆಂಡಾಮಂಡಲ

Sambhal violence

ಲಖನೌ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಸೇರಿದಂತೆ ಕಾಂಗ್ರೆಸ್ ನಾಯಕರು ಹಿಂಸಾಚಾರ ಪೀಡಿತ ಸಂಭಾಲ್‌ಗೆ (Sambhal violence) ತೆರಳುವಾಗ ಅವರನ್ನು ದಿಲ್ಲಿ-ಮೀರತ್ ರಾಷ್ಟ್ರೀಯ ಹೆದ್ದಾರಿಯ ಘಾಝಿಪುರ ಗಡಿಯಲ್ಲಿ ಪೊಲೀಸರು ಸಂಭಾಲ್‌ಗೆ ತೆರಳದಂತೆ ತಡೆದಿದ್ದಾರೆ. ಇದರಿಂದ ಸ್ಥಳದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡರನ್ನೊಳಗೊಂಡ ತಂಡ ಹಿಂಸಾಚಾರದಿಂದ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಲು ಸಂಭಾಲ್‌ಗೆ ತೆರಳುತ್ತಿತ್ತು. ಆದರೆ ಪೊಲೀಸರು ಘಾಝಿಪುರ ಗಡಿಯಲ್ಲಿ ಅವರನ್ನು ಹೋಗದಂತೆ ತಡೆದಿದ್ದಾರೆ. ಈಗಾಗಲೇ ಡಿಸೆಂಬರ್‌ 31ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೊರಗಿನವರಿಗೆ ಈ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಯಾವುದೇ ಅಹಿತಕಾರಿ ಘಟನೆ ನಡೆಯದಂತೆ ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. ಈಗಾಗಲೇ ರಾಹುಲ್‌ ಗಾಂಧಿ ಸಂಭಾಲ್‌ಗೆ ತೆರಳುವ ಅವಕಾಶ ನೀಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿದ ಕಾಂಗ್ರೆಸ್‌ ಮುಖಂಡರು ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ  ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ , ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ನಮ್ಮ ನಿಯೋಗವನ್ನು ಘಾಜಿಪುರ ಗಡಿಯಲ್ಲಿ ತಡೆಯಲಾಗಿದೆ. ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳನ್ನು ಭೇಟಿಯಾಗದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಉತ್ತರ ಪ್ರದೇಶ ಸರ್ಕಾರ ಏಕೆ ತಡೆದಿದೆ? ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯ ಹಿತದೃಷ್ಟಿಯಿಂದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ನಾವು ನಿರ್ಧರಿಸಿದ್ದೇವೆ. ಯುಪಿ ಸರ್ಕಾರವು ನಮಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಭಾರೀ ಟ್ರಾಫಿಕ್ ಜಾಮ್

ರಾಹುಲ್‌ ಗಾಂಧಿ ಹಾಗೂ ಅವರ ಬೆಂಗಾವಲುಪಡೆಯನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದರಿಂದ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಸದ್ಯ ಉತ್ತರ ಪ್ರದೇಶ ಪೊಲೀಸರು ಟ್ರಾಫಿಕ್‌ ತೆರವುಗೊಳಿಸುವ ಕಾರ್ಯಚರಣೆ ನಡೆಸುತ್ತಿದ್ದು, ಶಾಲಾ ವಾಹನ, ಆಂಬ್ಯುಲೆನ್ಸ್ ಸೇರಿದಂತೆ ಹಲವು ಜನ ಪರದಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ : Sambhal Violence: ಸಂಭಾಲ್‌ ಹಿಂಸಾಚಾರ; ದಂಗೆಕೋರರ ಫೋಟೊ ಬೀದಿ ಬೀದಿಗಳಲ್ಲಿ ಪ್ರಕಟ-ಗಲಭೆಕೋರರಿಂದಲೇ ನಷ್ಟ ವಸೂಲಿ!