Thursday, 5th December 2024

Sambhal Violence: ಬಿಗಿ ಭದ್ರತೆಯಲ್ಲಿ ಸಂಭಾಲ್‌ ಮಸೀದಿಗೆ ಭೇಟಿ ನೀಡಿದ ತನಿಖಾ ತಂಡ- ಸ್ಥಳೀಯರ ಜತೆ ಮಾತುಕತೆ

Sambhal violence

ಲಖನೌ: ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ ನಡೆದ ಹಿಂಸಾಚಾರಕ್ಕೆ (Sambhal violence) ಸಂಬಂಧಿಸಿದಂತೆ ಭಾರೀ ಭದ್ರತೆಯ ನಡುವೆ ಮೂವರು ಸದಸ್ಯರ ನ್ಯಾಯಾಂಗ ತನಿಖಾ ಸಮಿತಿ (three-member judicial inquiry committee) ಭಾನುವಾರ ಪರಿಶೀಲನೆ ನಡೆಸಿತು . ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ದೇವೇಂದ್ರ ಕುಮಾರ್ ಅರೋರಾ ನೇತೃತ್ವದ ತನಿಖಾ ತಂಡ ಘಟನೆ ನಡೆದ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದರು. ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಮೂರು ಸದಸ್ಯರ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಿದ್ದರು. ತನಿಖೆಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ನಿವೃತ್ತ ಐಎಎಸ್ ಅಮಿತ್ ಮೋಹನ್ ಪ್ರಸಾದ್ ಮತ್ತು ನಿವೃತ್ತ ಐಪಿಎಸ್ ಅರವಿಂದ್ ಕುಮಾರ್ ಜೈನ್ ಅವರನ್ನು ಆಯೋಗದ ಸದಸ್ಯರನ್ನಾಗಿ ನಿಯೋಜಿಸಲಾಗಿತ್ತು.

ಮೊರಾದಾಬಾದ್‌ ವಿಭಾಗೀಯ ಆಯುಕ್ತ ಆಂಜನೇಯ ಕುಮಾರ್‌ ಸಿಂಗ್‌ ಅವರು ಮಾತನಾಡಿ, ಸಮಿತಿಯು ಇಂದು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ ಮತ್ತು ತನಿಖೆಗೆ ಅನುಕೂಲಕರವಾಗುವಂತಹ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಬಿಗಿ ಭದ್ರತೆಯನ್ನು ಒದಗಿಸಿದ್ದೇವೆ ಎಂದು ಹೇಳಿದ್ದಾರೆ. ತನಿಖಾ ಸಮಿತಿಯು ಅವರ ಕೆಲಸವನ್ನು ಮಾಡುತ್ತದೆ, ಅವರು ಏನು ಮಾಡಬೇಕೆಂದು ಅವರು ನಿರ್ಧರಿಸುತ್ತಾರೆ, ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸಂಭಾಲ್‌ನ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು ಸಂಭಾಲ್‌ ಸಂಪೂರ್ಣವಾಗಿ ಶಾಂತಿಯುತವಾಗಿದೆ. ಇದೀಗ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ನಿರಂತರ ನಿಗಾ ಇರಿಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪೊಲೀಸ್‌ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ತರನಾದ ಅಹಿತಕರವಾದ ಘಟನೆ ಆಗದಂತೆ ಜಾಗರೂಕತೆ ವಹಿಸಲಾಗಿದೆ. ಈಗಾಗಲೇ ನಾವು ಸಾರ್ವಜನಿಕರ ಬಳಿ ಕೂಡ ಶಾಂತಿ ಕಾಪಾಡಲು ಮನವಿ ಮಾಡಿದ್ದೇವೆ ಎಂದರು.

ಈ ಸುದ್ದಿಯನ್ನೂ ಓದಿ : Sambhal Violence: ಸಂಭಾಲ್‌ ಹಿಂಸಾಚಾರ; ದಂಗೆಕೋರರ ಫೋಟೊ ಬೀದಿ ಬೀದಿಗಳಲ್ಲಿ ಪ್ರಕಟ-ಗಲಭೆಕೋರರಿಂದಲೇ ನಷ್ಟ ವಸೂಲಿ!