ಮುಂಬೈ: ತನ್ನದೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಸಂಜಯ್ ಚಕ್ರವರ್ತಿ(Sanjay Chakravarthi) ಬಂಧಿಸಲಾಗಿದೆ. ತನ್ನ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು(Kolkata Police) ಸಂಜಯ್ ಚಕ್ರವರ್ತಿ ಅವರನ್ನು ಮುಂಬೈನಲ್ಲಿ ಶುಕ್ರವಾರ ಅರೆಸ್ಟ್ ಮಾಡಿದ್ದಾರೆ.
ಜೂನ್ನಲ್ಲಿ ಈ ಘಟನೆ ನಡೆದಿದ್ದು, ಕೇಸ್ ದಾಖಲಾಗುತ್ತಿದ್ದಂತೆ ಸಂಜಯ್ ಚಕ್ರವರ್ತಿ ತಲೆಮರೆಸಿಕೊಂಡಿದ್ದರು. ಅವರಿಗಾಗಿ ಬರೋಬ್ಬರಿ ಎರಡು ತಿಂಗಳ ಕಾಲ ಹುಡುಕಾಟ ನಡೆಸಿದ ನಂತರ ಇಂದು ಅವರನ್ನು ಅರೆಸ್ಟ್ ಮಾಡಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆತನ ಮೇಲೆ ಆರೋಪ ಹೊರಿಸಲಾಗಿದೆ ಮತ್ತು ಮುಂಬೈನಿಂದ ಟ್ರಾನ್ಸಿಟ್ ರಿಮಾಂಡ್ನಲ್ಲಿ ಕರೆತಂದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನವೆಂಬರ್ 18 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಏನಿದು ಘಟನೆ?
ಜೂನ್ನಲ್ಲಿ ಈ ಘಟನೆ ನಡೆದಿದ್ದು, ಕೋಲ್ಕತ್ತಾದ ಯೋಗ ಸಂಸ್ಥೆಯಲ್ಲಿ ಗಾಯಕ 15 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ದೂರಿನ ಪ್ರಕಾರ, ಚಕ್ರವರ್ತಿ ತರಗತಿ ಮುಗಿದ ನಂತರ ಅಲ್ಲಿಯೇ ಉಳಿದುಕೊಂಡರು ಮತ್ತು ಇತರ ಎಲ್ಲಾ ವಿದ್ಯಾರ್ಥಿಗಳು ಹೋದಾಗ, ಅವನು ಸಂತ್ರಸ್ತೆಗೆ ಕಿರುಕುಳ ನೀಡಿದ್ದಾನೆ ಎಂದು ಅಧಿಕಾರಿ ಹೇಳಿದರು. ಸಂತ್ರಸ್ತೆಯನ್ನು ಆಕೆಯ ಪೋಷಕರು ಬೆಂಗಳೂರಿಗೆ ಕರೆದೊಯ್ದ ನಂತರ ಘಟನೆ ಬೆಳಕಿಗೆ ಬಂದಿದೆ.
“ಚಿಕಿತ್ಸೆಯ ಸಮಯದಲ್ಲಿ ಸಂತ್ರಸ್ತ ಬಾಲಕಿ ತನ್ನ ವೈದ್ಯರಿಗೆ ಸಂಪೂರ್ಣ ಘಟನೆಯನ್ನು ಬಹಿರಂಗಪಡಿಸಿದಳು. ಸೆಪ್ಟೆಂಬರ್ನಲ್ಲಿ ಉತ್ತರ 24 ಪರಗಣ ಜಿಲ್ಲೆಯ ಬೆಲ್ಘಾರಿಯಾ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ಪೋಷಕರು ದೂರು ಸಲ್ಲಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದರು. ಘಟನೆಯು ಅವರ ವ್ಯಾಪ್ತಿಯಲ್ಲಿ ಸಂಭವಿಸಿದ ಕಾರಣ ಪ್ರಕರಣವನ್ನು ತನಿಖೆಗಾಗಿ ಚಾರು ಮಾರ್ಕೆಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಅಲಿದ್ದ ವಿದ್ಯಾರ್ಥಿಗಳನ್ನೂ ವಿಚಾರಣೆಗೊಳಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Harassment: ರಾಮೇಶ್ವರಂ ಕೆಫೆ ಕ್ಯೂನಲ್ಲಿ ಲೈಂಗಿಕ ಕಿರುಕುಳ: ಸೋಶಿಯಲ್ ಮೀಡಿಯಾದಲ್ಲಿ ಯುವತಿಯ ಅಳಲು
ಕೆಲವು ತಿಂಗಳ ಹಿಂದೆ ನೃತ್ಯ ಸಂಯೋಜಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ತೆಲುಗಿನ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅನ್ನು ಅರೆಸ್ಟ್ ಮಾಡಲಾಗಿತ್ತು.