ಪಾಟ್ನಾ: ಬಿಹಾರದ ಸಾರನ್ ಲೋಕಸಭಾ ಕ್ಷೇತ್ರದಲ್ಲಿ ಲಾಲೂ ಪ್ರಸಾದ್ ಯಾದವ್ ವರ್ಸಸ್ ಲಾಲೂ ಪುತ್ರಿ ಪರಸ್ಪರ ಮುಖಾಮುಖಿಯಾಗಿ ಕಣಕ್ಕಿದಿದ್ದಾರೆ. ಅಪ್ಪ-ಮಗಳು ಇಬ್ಬರು ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರಾ ?
ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹೆಸರನ್ನೇ ಇಟ್ಟುಕೊಂಡಿರುವ ರೈತ ಈ ಬಾರಿ ಸಾರನ್ ಕ್ಷೇತ್ರದಲ್ಲಿ ರಾಷ್ಟ್ರೀಯ ಜನ ಸಂಭಾ ವನಾ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಆರ್‌ಜೆಡಿಯಿಂದ ಲಾಲೂ ಪುತ್ರಿ ರೋಹಿಣಿ ಆಚಾರ್ಯ ಕಣಕ್ಕಿಳಿದಿದ್ದಾರೆ.
ಸ್ಥಳೀಯ ರೈತ ಲಾಲೂ ಪ್ರಸಾದ್ ಯಾದವ್, ಸಾರನ್ ಜಿಲ್ಲೆಯವರಾಗಿದ್ದು, ಏ.26ರಂದು ಆರ್‌ಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. 2022ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಲಾಲೂ ಪ್ರಸಾದ್ ಯಾದವ್ ಸ್ಪರ್ದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಸಾರನ್ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಅನೇಕ ಬಾರಿ ಸ್ಪರ್ಧಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧವೂ ಸ್ಪರ್ಧಿಸಿದ್ದೆ. ಈ ಬಾರಿ ಅವರ ಪುತ್ರಿ ರೋಹಿಣಿ ಆಚಾರ್ಯ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ನಾನು ಪಂಚಾಯತ್‌ನಿಂದ ಅಧ್ಯಕ್ಷೀಯ ಚುನಾವಣೆವರೆಗೂ ಅದೃಷ್ಟ ಪರೀಕ್ಷೆಗೆ ನಡೆಸಿದ್ದೇನೆ. ನಾನು ಗೆದ್ದೇ ಗೆಲ್ಲುತ್ತೇನೆ. ಸಾರನ್ ಕ್ಷೇತ್ರದ ಜನ ನನ್ನ ಜೊತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಾಲೂ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಬಳಿ 5 ಲಕ್ಷ ರೂ ಮತ್ತು ತಮ್ಮ ಪತ್ನಿ ಬಳಿ 2 ಲಕ್ಷ ರೂ. ನಗದು, 17.60 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಹಾಗೂ ತಮ್ಮ ಪತ್ನಿ ಬಳಿ 5.20 ಲಕ್ಷ ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.