Thursday, 12th December 2024

ಪೆಗಾಸಸ್ ತಂತ್ರಾಂಶ: ಸುಪ್ರೀಂಗೆ ತನಿಖಾ ವರದಿ ಸಲ್ಲಿಕೆ

ನವದೆಹಲಿ: ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶ ಬಳಸಿಕೊಂಡು ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾರ್ಯ ಕರ್ತರ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಸಮಿತಿ ಸುಪ್ರೀಂ ಕೋರ್ಟ್‌ಗೆ ತನ್ನ ವರದಿ ಸಲ್ಲಿಸಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌. ವಿ. ರವೀಂದ್ರನ್ ಮೇಲ್ವಿಚಾರಣೆಯಲ್ಲಿ ರಚಿಸಲಾದ ಮೂವರು ಸದಸ್ಯರ ಸಮಿತಿಯು ಕಳೆದ ವಾರವೇ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ.

ವರದಿ ಪಡೆದುಕೊಂಡಿರುವ ಸುಪ್ರೀಂಕೋರ್ಟ್ ವಿಚಾರಣೆೆಗೆ ಇನ್ನೂ ಯಾವುದೇ ದಿನಾಂಕ ನಿಗದಿಪಡಿಸಿಲ್ಲ ಎಂದು ತಿಳಿದು ಬಂದಿದೆ. ಮುಂಬರುವ ಆ.12ರಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಸಮಿತಿಯು ಗಾಂಧಿನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠದ ಪ್ರಾಧ್ಯಾಪಕ ಡಾ.ಪ್ರಭಾಹರನ್ ಪಿ. ಮತ್ತು ಐಐಟಿ ಬಾಂಬೆಯ ಇನ್ಸ್ಟಿಟ್ಯೂಟ್ ಚೇರ್ ಅಸೋಸಿ ಯೇಟ್ ಪ್ರೊಫೆಸರ್ ಡಾ ಅಶ್ವಿನ್ ಅನಿಲ್ ಗುಮಾಸ್ತೆ ಅವರನ್ನು ಒಳಗೊಂಡಿದೆ.

ಕಳೆದ ಮೇ 20ರಂದು ಮೊದಲ ಗಡುವು ನಿಗದಿಪಡಿಸಿದ್ದ ಸುಪ್ರೀಂಕೋರ್ಟ್, ಅಂತಿಮ ವರದಿಯನ್ನು ಸಲ್ಲಿಸಲು ಜೂನ್ 20ರವರೆಗೆ ಸಮಯವನ್ನು ವಿಸ್ತರಿಸಿತ್ತು.

ಕೇಂದ್ರ ಸರ್ಕಾರಕ್ಕೆ ಮಾರಾಟವಾಗಿರುವ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶವನ್ನು ಬಳಸಿ ಕೊಂಡು ವಿರೋಧ ಪಕ್ಷದ ಹಲವು ನಾಯಕರ ಮೇಲೆ ಕಣ್ಗಾವಲು ಇಡಲಾಗಿದೆ. ದೇಶದ ಪ್ರಮುಖ 142ಕ್ಕೂ ಹೆಚ್ಚು ರಾಜಕೀಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.