ಮಹೇಂದ್ರಗಢ: ಪಾನಮತ್ತ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ ಪಲ್ಟಿಯಾಗಿ ಎಂಟು ಮಕ್ಕಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹರಿಯಾಣದಲ್ಲಿ ಸಂಭವಿಸಿದೆ.
ಹರಿಯಾಣದ ಮಹೇಂದ್ರಗಢದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತ ಸಂಭವಿಸಿದಾಗ ಸ್ಥಳದಲ್ಲೇ 6 ಮಕ್ಕಳು ದಾರುಣ ವಾಗಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ದಾಖಲಾದ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ 6 ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸುಮಾರು 15 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಶಾಲಾ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗುವ ವೇಳೆ ಆ ಬಸ್ಸಿನಲ್ಲಿ ಸುಮಾರು 35 ರಿಂದ 40 ಮಕ್ಕಳಿದ್ದರು.
ಅಪಘಾತದ ನಂತರ ಈ ಪೈಕಿ 6 ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಯಿತಾದರೂ ಅಷ್ಟರಲ್ಲಾ ಗಲೇ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಸ್ವಲ್ಪ ಸಮಯದ ನಂತರ ಇನ್ನೊಬ್ಬ ಮಗು ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಮಹೇಂದ್ರಗಢ ಜಿಲ್ಲೆಯ ಕನಿನಾ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಖಾಸಗಿ ಶಾಲೆಗೆ ಸೇರಿದ್ದು. ಅಪಘಾತದಲ್ಲಿ ಸುಮಾರು 15 ಮಕ್ಕಳು ಗಾಯಗೊಂಡಿದ್ದಾರೆ. ಕನಿಬಾ ಪಟ್ಟಣದ ಸಮೀಪ ಕನಿನಾ-ದಾದ್ರಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಪಘಾತದ ನಂತರ ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ತಲುಪಿದ್ದು ಈ ವೇಳೆ ಬಸ್ ಚಾಲಕ ಕುಡಿದ ಅಮಲಿನಲ್ಲಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.