Saturday, 23rd November 2024

Scorpion Venom: ವಿಶ್ವದಲ್ಲೇ ಅತ್ಯಂತ ದುಬಾರಿ ಈ ಚೇಳಿನ ವಿಷ; ಲೀಟರ್ ಗೆ 80 ಕೋಟಿ ರೂ!

Scorpion Venom

ಹಾವುಗಳ ವಿಷವನ್ನು(Snake venom) ಕೆಲವು ಔಷಧಗಳಿಗೆ (medicine) ಬಳಸುವುದನ್ನು ಕೇಳಿದ್ದೇವೆ. ಆದರೆ ಈಗ ವೈದ್ಯಕೀಯ ಲೋಕದಲ್ಲಿ ಚೇಳಿನ ವಿಷಕ್ಕೂ (Scorpion Venom) ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಅತ್ಯಂತ ಅಪಾಯಕಾರಿ ಚೇಳುಗಳಿಂದ ಉತ್ಪತ್ತಿಯಾಗುವ ವಿಷ ಈಗ ವಿಶ್ವದ ಅತ್ಯಂತ ಅಮೂಲ್ಯವಾದ ದ್ರವಗಳಲ್ಲಿ (Most Expensive Liquid) ಒಂದಾಗಿದೆ. ಯಾಕೆಂದರೆ ಇದು ತುಂಬಾ ದುಬಾರಿಯಾಗಿದೆ.

ಡೆತ್‌ಸ್ಟಾಕರ್ ಎಂಬ ಚೇಳಿನ ವಿಷ ತುಂಬಾ ದುಬಾರಿಯಾಗಿದೆ. ಯಾಕೆಂದರೆ ಇದು ಕೊಲ್ಲುವುದಕ್ಕಿಂತ ಹೆಚ್ಚಾಗಿ ಜೀವ ಉಳಿಸುವ ಪ್ರಯೋಗಕ್ಕಾಗಿ ಬಳಕೆಯಾಗುತ್ತಿದೆ. ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಚೇಳುಗಳಲ್ಲಿ ಒಂದಾದ ಡೆತ್‌ಸ್ಟಾಕರ್ ಚೇಳಿನ ವಿಷವು ಒಂದು ಲೀಟರ್ ಗೆ ಸರಿಸುಮಾರು 80 ಕೋಟಿ ರೂ. ಬೆಲೆ ಬಾಳುತ್ತದೆ. ಹೀಗಾಗಿ ಇದು ಭೂಮಿಯ ಮೇಲಿನ ಅತ್ಯಂತ ದುಬಾರಿ ದ್ರವವಾಗಿ ಗುರುತಿಸಿಕೊಂಡಿದೆ. ಜಾತಿವಾರು ಇತರ ಚೇಳುಗಳ ಒಂದು ಲೀಟರ್ ವಿಷದ ಬೆಲೆ ಕೋಟಿ ಮೌಲ್ಯ ಹೊಂದಿದೆ.

ಯಾವುದಕ್ಕೆ ಬಳಕೆ?

ಕ್ಯಾನ್ಸರ್ ಗಡ್ಡೆಗಳನ್ನು ಗುರುತಿಸುವುದರಿಂದ ಹಿಡಿದು ಮಲೇರಿಯಾ ಚಿಕಿತ್ಸೆಯವರೆಗೆ ಚೇಳಿನ ವಿಷವನ್ನು ವ್ಯಾಪಕವಾಗಿ ಔಷಧಗಳಲ್ಲಿ ಬಳಸಲಾಗುತ್ತದೆ. ಡೆತ್‌ಸ್ಟಾಕರ್ ಚೇಳುಗಳ ವಿಷವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲಾಗುವುದಿಲ್ಲ. ಯಾಕೆಂದರೆ ಇದನ್ನು ಕಡಿಮೆ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ.

Scorpion Venom

ದುಬಾರಿ ಯಾಕೆ?

ವರದಿ ಪ್ರಕಾರ ಈ ಚೇಳಿನ ಒಂದು ಹನಿ ವಿಷಕ್ಕೆ ಸುಮಾರು ಹತ್ತು ಸಾವಿರ ರೂ. ಬೆಲೆ ಬಾಳುತ್ತದೆ. ಇದು ಇಷ್ಟೊಂದು ದುಬಾರಿಯಾಗಲು ಅವುಗಳನ್ನು ಪಡೆಯುವ ವಿಧಾನ ಮುಖ್ಯ ಕಾರಣವಾಗಿದೆ. ಹೆಚ್ಚಾಗಿ ಇದರ ವಿಷವನ್ನು ಕೈಯಿಂದ ಹೊರತೆಗೆಯಲಾಗುತ್ತದೆ. ಒಂದು ಚೇಳಿನಿಂದ ಒಂದು ಬಾರಿ ಕೇವಲ 0.2 ಮಿಲಿ ಗ್ರಾಂ ವಿಷ ಸಂಗ್ರಹಿಸಬಹುದು. ಒಂದು ಲೀಟರ್ ವಿಷ ಸಂಗ್ರಹಿಸಲು ಸಾವಿರಾರು ದಿನ ಕಾಯಬೇಕು, ಲಕ್ಷಾಂತರ ಬಾರಿ ಪ್ರಯತ್ನಿಸಬೇಕು.

ಈ ವಿಷವು ಮೌಲ್ಯಯುತವಾಗಿರಲು ಮುಖ್ಯ ಇನ್ನೊಂದು ಕಾರಣ ಇದರ ಒಂದು ಅಂಶವು ಮಾನವ ಮೆದುಳಿನ ಗೆಡ್ಡೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ವಿಷದ ಇತರ ಘಟಕಗಳು ಇನ್ಸುಲಿನ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ನೀಡಲು ವಿಜ್ಞಾನಿಗಳ ಪ್ರಕಾರ ಇದರಲ್ಲಿರುವ ಕ್ಲೋರೊಟಾಕ್ಸಿನ್ ಕೆಲವು ರೀತಿಯ ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ಹಲವಾರು ವೈದ್ಯಕೀಯ ಪ್ರಗತಿಯಲ್ಲಿ ಸಂಭಾವ್ಯ ಬಳಕೆಗಳನ್ನು ಹೊಂದಿದೆ. ಇದನ್ನು ಕ್ಯಾನ್ಸರ್ ಗೆಡ್ಡೆಗಳ ಗಾತ್ರ ಮತ್ತು ಸ್ಥಳವನ್ನು ಗುರುತಿಸಲು ಸಹ ಬಳಸಲಾಗುತ್ತದೆ.

Monkeypox : ಭಾರತದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್‌ ಕೇಸ್‌ ಪತ್ತೆ

ಎಲ್ಲಿ ಕಂಡು ಬರುತ್ತದೆ?

ಡೆತ್‌ಸ್ಟಾಕರ್ ಚೇಳು ಉತ್ತರ ಆಫ್ರಿಕಾದಿಂದ ಮಧ್ಯಪ್ರಾಚ್ಯದವರೆಗೆ ಮರುಭೂಮಿ ಮತ್ತು ಕುರುಚಲು ಪ್ರದೇಶದ ಆವಾಸಸ್ಥಾನಗಳಲ್ಲಿ ಕಂಡುಬರುತ್ತದೆ. ಸಹಾರಾ, ಅರೇಬಿಯನ್, ಥಾರ್ ಮರುಭೂಮಿ ಮತ್ತು ಮಧ್ಯ ಏಷ್ಯಾದಲ್ಲಿ ಇವುಗಳು ವ್ಯಾಪಕವಾದ ನೆಲೆಯನ್ನು ಕಂಡುಕೊಂಡಿವೆ.

ಮಾನವರಿಗೆ ಅಪಾಯಕಾರಿಯೇ?

ಡೆತ್‌ಸ್ಟಾಕರ್ ಚೇಳಿನ ವಿಷದಲ್ಲಿ ನ್ಯೂರೋಟಾಕ್ಸಿನ್‌ಗಳು ಕ್ಲೋರೊಟಾಕ್ಸಿನ್, ಚಾರಿಬ್ಡೋಟಾಕ್ಸಿನ್, ಸಿಲಾಟಾಕ್ಸಿನ್ ಮತ್ತು ಅಜಿಟಾಕ್ಸಿನ್‌ಗಳನ್ನು ಒಳಗೊಂಡಿದೆ. ಆದರೆ ಈ ವಿಷವು ಮಾನವನಿಗೆ ಅಪಾಯಕಾರಿಯಲ್ಲ. ಆದರೆ ಇದು ಕುಟುಕಿದರೆ ತೀವ್ರ ನೋವುಂಟು ಮಾಡುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕರಿಗೆ ಇದರಿಂದ ಯಾವುದೇ ಹಾನಿಯಿಲ್ಲ.