Sunday, 15th December 2024

ಭದ್ರತೆ ಲೋಪ: ಆರು ಮಂದಿ ಬಂಧನ, ಎಂಟು ಸಂಸತ್ ಸಿಬ್ಬಂದಿ ಅಮಾನತು

ನವದೆಹಲಿ: ಭದ್ರತೆ ಲೋಪ ಎಸಗಿ ಲೋಕಸಭೆಗೆ ನುಗ್ಗಿ ಕಲರ್‌ ಗ್ಯಾಸ್‌ ಸಿಡಿಸಿದ ಘಟನೆಯ ಬಗ್ಗೆ ಭದ್ರತಾ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ. ಏಳು ಮಂದಿ ಆರೋಪಿಗಳು ದಾಳಿಯನ್ನು ಸಾಕಷ್ಟು ಪ್ಲ್ಯಾನ್‌ ಮಾಡಿಯೇ ಸಂಘಟಿಸಿದ್ದರು ಎಂದು ತಿಳಿದುಬಂದಿದೆ.

ಆ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಎಂಟು ಸಂಸತ್ ಸಿಬ್ಬಂದಿಯನ್ನು ಅಮಾನತುಗೊಳಿಸ ಲಾಗಿದೆ.

ಘಟನೆ ಸಂಬಂಧ ಮೈಸೂರಿನ ಡಿ.ಮನೋರಂಜನ್, ಉತ್ತರ ಪ್ರದೇಶದ ಸಾಗರ್ ಶರ್ಮಾ, ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ, ಹರ್ಯಾಣದ ಹಿಸಾರ್‌ನ ನೀಲಮ್ ದೇವಿ, ಗುರುಗ್ರಾಮದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಅವರನ್ನು ಈಗಾಗಲೇ ಬಂಧಿಸಲಾಗಿದೆ.

ಈ ಪೈಕಿ, ಡಿ.ಮನೋರಂಜನ್ ಮತ್ತು ಸಾಗರ್ ಶರ್ಮಾ ಅವರು ಲೋಕಸಭೆ ಒಳಗೆ ಕಲರ್ ಸ್ಪ್ರೇ ಸಿಡಿಸಿದರೆ, ನೀಲಂದೇವಿ ಮತ್ತು ಅಮೋಲ್ ಶಿಂಧೆ ಅವರು ಸಂಸತ್ತಿನ ಹೊರಗೆ ಕೆಂಪು ಮತ್ತು ಹಳದಿ ಕಲರ್ ಗ್ಯಾಸ್ ಕ್ಯಾನಸ್ಟರ್‌ಗಳನ್ನು ಸಿಡಿಸಿದರು.

ಕಲಾಪದಲ್ಲಿ ಆತಂಕದ ಪರಿಸ್ಥಿತಿ ಸೃಷ್ಟಿಸುವ ಮೊದಲು ಲೋಕಸಭೆಯ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಶರ್ಮಾ ಮತ್ತು ಮನೋ ರಂಜನ್ ಅವರಿಗೆ, ಮೈಸೂರು-ಕೊಡಗಿನ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯ ವಿನಂತಿ ಮೇರೆಗೆ ಪಾಸ್‌ಗಳನ್ನು ನೀಡಲಾಗಿತ್ತು.