Saturday, 14th December 2024

ಸೀಮಾ ಹೈದರ್ -ಪ್ರಿಯಕರ ಸಚಿನ್ ವಿಚಾರಣೆ ಅಂತ್ಯ

ಕ್ನೋ: ಪಾಕಿಸ್ತಾನದಿಂದ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಹಾಗೂ ಪ್ರಿಯಕರ ಸಚಿನ್ ಮತ್ತು ಸಚಿನ್ ತಂದೆ ನೇತ್ರಪಾಲ್ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸಿ, ಮೂವರನ್ನೂ ಅಧಿಕಾರಿಗಳ ತಂಡ ನೋಯ್ಡಾದಿಂದ ದೆಹಲಿಗೆ ಕರೆದೊಯ್ದಿದ್ದಾರೆ.

ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ಬಂದ ಸೀಮಾ ಹೈದರ್ 50 ದಿನಗಳ ಕಾಲ ರಬೂಪುರದಲ್ಲಿ ತಂಗಿರುವ ಬಗ್ಗೆ ಗೌತಮ್ ಬುಧ್ ನಗರ ಪೊಲೀಸರು ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳಿಗೆ ಪತ್ರ ಬರೆದಿತ್ತು. ಎಟಿಎಸ್ ಮೊದಲಿನಿಂದಲೂ ಈ ವಿಷಯದ ಮೇಲೆ ಕಣ್ಣಿಟ್ಟಿತ್ತು. ಸೀಮಾ ಹೈದರ್ ಬೇಹುಗಾರಿಕೆಗಾಗಿ ಪ್ರೇಮದ ನೆಪದಲ್ಲಿ ಭಾರತಕ್ಕೆ ಬಂದಿದ್ದಾಳೆಯೇ ಅಥವಾ ಯಾವುದಾದರೂ ದುರುದ್ದೇಶದಿಂದ ಭಾರತಕ್ಕೆ ಬಂದಿದ್ದಾಳೆಯೇ ಎಂಬುದನ್ನು ಪತ್ತೆ ಹಚ್ಚಲು ಎಟಿಎಸ್ ಪ್ರಯತ್ನಿಸುತ್ತಿದೆ.

ಸೀಮಾ ಗೂಢಾಚಾರಿಯೇ, ಆಕೆಗೆ ಐಎಸ್‌ಐ ಜೊತೆ ಸಂಪರ್ಕವಿದೆಯೇ ಅಥವಾ ಆಕೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾಳೆಯೇ? ಎಟಿಎಸ್ ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ದೆಹಲಿಯಿಂದ ಐಬಿ ತಂಡ ಜಿಲ್ಲೆಗೆ ಆಗಮಿಸಿದ್ದು, ತಂಡ ಸೀಮಾ ಹೈದರ್ ಬಗ್ಗೆ ತನಿಖೆ ನಡೆಸಿತ್ತು.

ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್, ಪಬ್ಜಿ ಗೇಮ್ ಆಡುವ ಮೂಲಕ ಭಾರತದ ಸಚಿನ್ ಮೀನಾ ಜತೆ ಪ್ರೇಮಾಂಕುರವಾಗಿತ್ತು.