Saturday, 28th September 2024

Self Harming: ಫ್ಲ್ಯಾಟೊಂದರಲ್ಲಿ 5 ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ, ಕಾರಣ ನಿಗೂಢ

Self Harming

ನವದೆಹಲಿ: ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ದಿಲ್ಲಿಯಲ್ಲಿ ನಡೆದಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯ ವಸಂತ್‌ ಕಂಜ್‌ನ ರಂಗಪುರಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ (Self Harming).

ಈ ಕುಟುಂಬ ವಾಸಿಸುತ್ತಿದ್ದ ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಕಟ್ಟಡದ ನಿವಾಸಿಯೊಬ್ಬರು ಶುಕ್ರವಾರ (ಸೆಪ್ಟೆಂಬರ್‌ 27) ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗ ಪ್ರಕರಣ ಬೆಳೆಕಿಗೆ ಬಂದಿದೆ. ಎಷ್ಟು ಬಾಗಿಲು ಬಡಿದರೂ ತೆರೆಯದಿದ್ದಾಗ ಅನುಮಾನಗೊಂಡು ಪೊಲೀಸರು ಮಾಹಿತಿ ನೀಡಲಾಗಿತ್ತು. ಮನೆಯವರು ಸೆಪ್ಟೆಂಬರ್ 24ರ ಬಳಿಕ ಕಾಣಿಸದೇ ಇದ್ದುದು ಕೂಡ ತಮ್ಮ ಅನುಮಾನವನ್ನು ಇಮ್ಮಡಿಗೊಳಿಸಿತ್ತು ಎಂದು ನೆರೆ ಮನೆಯವರು ತಿಳಿಸಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಚ್ಚಿದ ಬಾಗಿಲು ಮುರಿದಿದ್ದಾರೆ. ಈ ವೇಳೆ ಐವರ ಮೃತದೇಹ ಪತ್ತೆಯಾಗಿದೆ. ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಮತ್ತು ಫ್ಲ್ಯಾಟಿನಿಂದ ಮೂರು ಪ್ಯಾಕೆಟ್ ವಿಷ, ಲೋಟ ಮತ್ತು ಚಮಚವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು

ಮೃತರನ್ನು ಬಡಗಿಯಾಗಿ ಕೆಲಸ ಮಾಡುತ್ತಿದ್ದ ಹೀರಾಲಾಲ್ ಶರ್ಮಾ (46), ಅವರ ಪುತ್ರಿಯರಾದ ನೀತು (26), ನಿಕ್ಕಿ (24), ನೀರು (23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ. ಇಬ್ಬರು ಹೆಣ್ಣುಮಕ್ಕಳು ವಿಶೇಷಚೇತನರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. “ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು ಮತ್ತು ಅಗ್ನಿಶಾಮಕ ದಳದ ತಂಡದ ಸಹಾಯದಿಂದ ಪೊಲೀಸರು ಅದನ್ನು ಒಡೆದು ಪ್ರವೇಶಿಸಿದರು. ಫ್ಲ್ಯಾಟ್‌ನಲ್ಲಿ ಎರಡು ಕೊಠಡಿಗಳಿವೆ. ಮೊದಲ ಕೋಣೆಯಲ್ಲಿ ಪುರುಷನ ಶವ ಪತ್ತೆಯಾಗಿದ್ದರೆ, ಇನ್ನೊಂದು ಕೋಣೆಯಲ್ಲಿ ನಾಲ್ಕು ಮಹಿಳೆಯರ ಶವ ಕಂಡು ಬಂದಿದೆʼʼ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಹೀರಾಲಾಲ್ ಶರ್ಮಾ ಅವರ ಪತ್ನಿ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ. ಪತ್ನಿಯ ಮರಣದ ನಂತರ ಹೀರಾಲಾಲ್ ಶರ್ಮಾ ಖಿನ್ನತೆಗೆ ಜಾರಿದ್ದರು. ಯಾರೊಂದಿಗೂ ಬೆರೆಯುತ್ತಿರಲಿಲ್ಲ. ತಮ್ಮ ವಿಶೇಷ ಚೇತನ ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಪ್ರತಿ ತಿಂಗಳು ಸುಮಾರು 25 ಸಾವಿರ ರೂ. ದುಡಿಯುತ್ತಿದ್ದ ಹೀರಾಲಾಲ್ ಶರ್ಮಾ ಈ ವರ್ಷದ ಜನವರಿಯಿಂದ ಕೆಲಸಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Physical Abuse : ದೇಗುಲದ ಒಳಗೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಅರ್ಚಕ ಸೆರೆ

ಚೆನ್ನೆಯಲ್ಲಿಯೂ ಸಾಮೂಹಿಕ ಆತ್ಮಹತ್ಯೆ

ಸೆಪ್ಟೆಂಬರ್‌ 26ರಂದು ಚೆನ್ನೈಯಲ್ಲಿಯೂ ಕುಟುಂಬವೊಂದರ ಸಾಮೂಹಿಕ ಆತ್ಮಹತ್ಯೆಯ ಪ್ರಕರಣ ಬೆಳಕಿಗೆ ಬಂದಿತ್ತು. ತಮಿಳುನಾಡಿನ ಪುಡುಕ್ಕೊಟ್ಟೈ ಜಿಲ್ಲೆಯಲ್ಲಿ ನಿಂತಿದ್ದ ಕಾರೊಂದರಲ್ಲಿ ಒಂದೇ ಕುಟುಂಬದ ಐವರ ಶವಗಳು ಪತ್ತೆಯಾಗಿದ್ದವು. ತಿರುಚಿ- ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಪರಿಶೀಲಿಸಿದ ವೇಳೆ ಈ ಆಘಾತಕಾರಿ ದೃಶ್ಯ ಕಂಡುಬಂದಿತ್ತು. ಸೆಪ್ಟೆಂಬರ್‌ 25ರ ಸಂಜೆಯಿಂದಲೂ ನಮನಸಮುದ್ರನ್ ಪ್ರದೇಶದಲ್ಲಿ ಕಾರು ನಿಂತಿರುವುದು ಕಂಡು ಅನುಮಾನಗೊಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು. ಅವರು ಧಾವಿಸಿ ಪರಿಶೀಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಐದೂ ಜನರು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.