Sunday, 15th December 2024

Self Harming: ಹೆಂಗಸಿನಂತೆ ಡ್ರೆಸ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ಉದ್ಯೋಗಿ!

Self Harming

ಮಸ್ಸೂರಿ: ಉತ್ತರಾಖಂಡದ ಮಸ್ಸೂರಿ ಜಿಲ್ಲೆಯ ಸರ್ಕಾರಿ ಕ್ವಾರ್ಟರ್ಸ್‍ನ ಒಂದು ಕೋಣೆಯಲ್ಲಿ  ಸರ್ಕಾರಿ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ಉದ್ಯೋಗಿಯ ಶವ ನೋಡಿ ಪೊಲೀಸರು ಸೇರಿದಂತೆ ಅಲ್ಲಿದ್ದವರು ಆಘಾತಗೊಂಡಿದ್ದಾರೆ. ಯಾಕೆಂದರೆ ಅವರು ಆತ್ಮಹತ್ಯೆ (Self Harming)ಮಾಡಿಕೊಳ್ಳುವ ಮೊದಲು ಮುಖಕ್ಕೆ ಮೇಕಪ್ ಮಾಡಿಕೊಂಡು, ಮಹಿಳೆಯರ ಉಡುಪು ಧರಿಸಿದ್ದರು.

ಲೈಂಗಿಕ ಸಮಸ್ಯೆಯಿಂದಾಗಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಅನುಕುಲ್ ರಾವತ್ ಎಂದು ಗುರುತಿಸಲಾಗಿದೆ. ವಿಚಿತ್ರವೆನೆಂದರೆ ಅನುಕುಲ್ ಆತ್ಮಹತ್ಯೆಗೂ ಮುನ್ನ ಸೀರೆ ಉಟ್ಟು, ಕಣ್ಣುಗಳಿಗೆ ಕಾಜಲ್ ಹಚ್ಚಿ, ತುಟಿಗೆ ಲಿಪ್‍ಸ್ಟಿಕ್‍ ಹಚ್ಚಿಕೊಂಡು ಹೆಂಗಸಿನಂತೆ ಡ್ರೆಸ್ ಮಾಡಿಕೊಂಡು ನಂತರ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರ ವರದಿ ಪ್ರಕಾರ, 22 ವರ್ಷದ ಅನುಕುಲ್ ರಾವತ್ ಶ್ರೀನಗರದ ಗರ್ವಾಲ್‍ನ ಉಫಾಲ್ಡಾ ನಿವಾಸಿಯಾಗಿದ್ದು,  ಅವರು ಒಂದೂವರೆ ವರ್ಷದ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್ಬಿಎಸ್) ಗೆ ಮಲ್ಟಿ-ಟಾಸ್ಕಿಂಗ್ ವರ್ಕರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರಂತೆ. ಅವರು ಹ್ಯಾಪಿ ವ್ಯಾಲಿಯಲ್ಲಿರುವ ಸರ್ಕಾರಿ ಕ್ವಾರ್ಟರ್ಸ್‍ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ದಾಳಿ ಮಾಡಿದ ಚಿರತೆಯನ್ನು ದೊಣ್ಣೆಯಿಂದ ಹೊಡೆದು ಕೊಂದ ಮಾಜಿ ಸೈನಿಕ

ಅನುಕುಲ್ ಕಚೇರಿ ಕೆಲಸಕ್ಕೆ ಬರದಿದ್ದಾಗ, ಅವರನ್ನು ಹುಡುಕಾಡಲು ಶುರುಮಾಡಿದ್ದಾರೆ.  ನಂತರ ಅವರ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಲಾಗಿದೆ ಎಂದು ತಿಳಿದು ಅಲ್ಲಿಗೆ ಪೊಲೀಸರನ್ನು ಕರೆಸಿದ್ದಾರೆ. ನಂತರ ಪೊಲೀಸರು ಬಾಗಿಲು ಮುರಿದು ಒಳಗೆ ಬಂದಾಗ ಸೀರೆ ಉಟ್ಟು ಮೇಕಪ್ ಧರಿಸಿದ ಅನುಕುಲ್‍ ಶವ ಪತ್ತೆಯಾಗಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅನುಕುಲ್ ಈ ತೀವ್ರ ಕ್ರಮವನ್ನು ಏಕೆ ತೆಗೆದುಕೊಂಡರು ಎಂಬುದಕ್ಕೆ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ. ಆದರೆ ಅನುಕುಲ್ ರಾವತ್ ತುಂಬಾ ಶಾಂತಸ್ವಭಾವದವರು ಮತ್ತು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಅವರ ನೆರೆಹೊರೆಯವರು ಮತ್ತು ಸಹೋದ್ಯೋಗಿಗಳು ತಿಳಿಸಿದ್ದಾರೆ.