ಲಕ್ನೊ: ಹೆಂಡತಿಯರಿಂದ ಕಾನೂನುಬದ್ಧವಾಗಿ ಬೇರ್ಪಡದೆ ಆರನೇ ಮದುವೆಗೆ ಸಜ್ಜಾಗುತ್ತಿದ್ದ, ಹಾಗೂ ಹನಿ ಟ್ರ್ಯಾಪ್ ಗೆ ಸಿಲುಕಿಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕಾನ್ಪುರದಲ್ಲಿ ಬಂಧಿಸಲಾಗಿದೆ.
ಆರೋಪಿಯನ್ನು ಶಹಜಹಾನ್ಪುರದ ಅನುಜ್ ಚೇತನ್ ಕಥೇರಿಯಾ ಎಂದು ಗುರುತಿಸಲಾಗಿದ್ದು, ಆರನೇ ಬಾರಿಗೆ ಮದುವೆ ಯಾಗಲು ಯೋಜಿಸುತ್ತಿದ್ದಾಗ, ಪತ್ನಿಯ ದೂರಿನ ಮೇರೆಗೆ ಸ್ವಯಂ ಘೋಷಿತ ‘ಬಾಬಾ’ ಅನುಜ್ ಕಥೇರಿಯಾನನ್ನು ಬಂಧಿಸ ಲಾಗಿದೆ ಎಂದು ದಕ್ಷಿಣ ಕಾನ್ಪುರ ಪೊಲೀಸ್ ಡಿಸಿಪಿ ರವೀನಾ ತ್ಯಾಗಿ ತಿಳಿಸಿದ್ದಾರೆ.
ಆರಂಭಿಕ ತನಿಖೆಯಲ್ಲಿ ಅನುಜ್ 2005 ರಲ್ಲಿ ಮೊದಲ ಬಾರಿಗೆ ವಿವಾಹವಾಗಿದ್ದ, 2010 ರಲ್ಲಿ, ಬರೇಲಿ ಜಿಲ್ಲೆಯ ಮಹಿಳೆಯನ್ನು ಮದುವೆಯಾದ. ಆಕೆ ಕೂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ನಾಲ್ಕು ವರ್ಷಗಳ ನಂತರ, ಔರೈಯಾ ಜಿಲ್ಲೆಯ ಮಹಿಳೆಯನ್ನು, ಬಳಿಕ ಮೂರನೆಯ ಹೆಂಡತಿಯ ಸೋದರ ಸಂಬಂಧಿಯನ್ನು ಮದುವೆಯಾದ. ಆಕೆ ಈತನ ಹಿಂದಿನ ವಿವಾಹಗಳ ಬಗ್ಗೆ ತಿಳಿದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ. 2019 ರಲ್ಲಿ ಐದನೇ ಬಾರಿಗೆ ವಿವಾಹವಾದ. ಸ್ವಲ್ಪ ಸಮಯದ ನಂತರ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ.
ಮಹಿಳೆ ಚಾಕೆರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಅನುಜ್ ಕಿದ್ವಾಯ್ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸು ತ್ತಿದ್ದ ಕಾರಣ, ಮಹಿಳೆ ಕಳೆದ ತಿಂಗಳು ಇದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ‘ಎಂದು ಪೊಲೀಸರು ತಿಳಿಸಿದ್ದಾರೆ.
ಅನುಜ್ ಮದುವೆ ವೆಬ್ ಸೈಟ್ ನಲ್ಲಿ ತಾನೊಬ್ಬ ಸರಕಾರಿ ಶಿಕ್ಷಕ ಅಥವಾ ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಲಕ್ಕಿ ಪಾಂಡೆ ಎಂಬ ಹೆಸರಿನಲ್ಲಿ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ. ಮಹಿಳೆಯರ ಸಂಪರ್ಕ ಸಾಧಿಸಿದ ನಂತರ ಆಶ್ರಮಕ್ಕೆ ಕರೆಸಿಕೊಂಡು ಮಂತ್ರ-ತಂತ್ರ ನಡೆಸುತ್ತಿದ್ದ. ಆಶ್ರಮಕ್ಕೆ ಬರುತ್ತಿದ್ದ ಮಹಿಳೆಯರನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.