ನಟಿ ಹಾಗೂ ವೈಎಸ್ಆರ್ಪಿ ನಾಯಕಿ ರೋಜಾ ಸೆಲ್ವಸ್ವಾಮಿ ತಮ್ಮ ಪತಿ ಜತೆಗೆ ತಮಿಳುನಾಡಿನ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ತೆರಳಿದ್ದರು.
ಅಲ್ಲಿದ್ದವರು ನಾ ಮುಂದು ತಾ ಮುಂದು ಎಂದು ಸೆಲ್ಫಿಗೆ ಮುಗಿ ಬಿದ್ದರು, ಆದರೆ ಸ್ವಚ್ಛತಾ ಸಿಬ್ಬಂದಿ ಅವರ ಬಳಿಗೆ ಬಂದಾಗ ಅಂತರ ಕಾಯ್ದು ಕೊಳ್ಳುವಂತೆ ಸನ್ನೆ ಮಾಡಿರುವ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ.
ರೋಜಾ ಮತ್ತು ಅವರ ಪತಿ ಮತ್ತು ನಿರ್ದೇಶಕ ಆರ್‌ಕೆ ಸೆಲ್ವಮಣಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತಿರುಚೆಂದೂರಿನಲ್ಲಿ ಈ ಘಟನೆ ಸಂಭವಿಸಿದೆ. ಹಲವಾರು ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ದಂಪತಿ ಬಳಿಗೆ ಬಂದು ತಮ್ಮ ಸೆಲ್ ಫೋನ್‌ಗಳೊಂದಿಗೆ ಸೆಲ್ಫಿ ತೆಗೆದುಕೊಂಡರು.
ಆ ಸಮಯದಲ್ಲಿ, ದೇವಸ್ಥಾನದಲ್ಲಿ ಕೆಲಸ ಮಾಡುವ ಇಬ್ಬರು ಮಹಿಳಾ ಶುಚಿಗೊಳಿಸುವ ಸಿಬ್ಬಂದಿ ಫೋಟೊಗಾಗಿ ರೋಜಾ ಅವರ ಬಳಿಗೆ ಬಂದಾಗ ಅವರು ಅಂತರ ಕಾಯ್ದುಕೊಳ್ಳುವಂತೆ ಸನ್ನೆ ಮಾಡಿದ್ದು ಸಿಬ್ಬಂದಿ ಮುಜುಗರಕ್ಕೀಡಾಗಿದ್ದಾರೆ.
ರೋಜಾ ಅವರ ನಡವಳಿಕೆಯಿಂದ ಬೇಸರಗೊಂಡ ಸಿಬ್ಬಂದಿ ದೂರದಲ್ಲೇ ನಿಂತು ಒಲ್ಲದ ಮನಸ್ಸಿನಿಂದ ಸೆಲ್ಫಿ ತೆಗೆದುಕೊಂಡು ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಎಲ್ಲರೂ ನಟಿಯನ್ನು ಟೀಕಿಸಲು ಶುರು ಮಾಡಿದ್ದಾರೆ.