Thursday, 12th December 2024

512 ಕೆಜಿ ಈರುಳ್ಳಿ ಮಾರಿ ಗಳಿಸಿದ್ದು ಕೇವಲ 2.49 ರೂ. ಲಾಭ..!

ಪುಣೆ: ಮಹಾರಾಷ್ಟ್ರದ ಸೊಲ್ಲಾಪುರದ ರೈತರೊಬ್ಬರು ತಾವು ಬೆಳೆದ 512 ಕೆಜಿ ಈರುಳ್ಳಿಯನ್ನು ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ ಕೇವಲ 2.49 ರೂ. ಲಾಭ ಗಳಿಸಿ ಆಘಾತಕ್ಕೊಳಗಾಗಿದ್ದಾರೆ.

ಸೊಲ್ಲಾಪುರದ ಬಾರ್ಶಿ ತಹಸಿಲ್‌ನಲ್ಲಿ ವಾಸವಾಗಿರುವ 63 ವರ್ಷದ ರಾಜೇಂದ್ರ ಚವ್ಹಾಣ ಎಂಬ ರೈತ 70 ಕಿಮೀ ಪ್ರಯಾಣಿಸಿ ಸೊಲ್ಲಾಪುರ ಮಾರುಕಟ್ಟೆ ಯಾರ್ಡ್‌ನಲ್ಲಿ ಪ್ರತಿ ಕೆಜಿ ಈರುಳ್ಳಿಯನ್ನು 1 ರೂ. ನಂತೆ ಮಾರಾಟ ಮಾಡಿದ್ದು, ಒಟ್ಟಾರೆಯಾಗಿ ಅವರಿಗೆ 512 ರೂ. ನಿವ್ವಳ ಲಾಭ ಸಿಕ್ಕಿದೆ.

ಪಿಟಿಐ ಜೊತೆ ಮಾತನಾಡಿದ ಚವ್ಹಾಣ್, ‘ಸೋಲಾಪುರದ ಈರುಳ್ಳಿ ವ್ಯಾಪಾರಿಯೊಬ್ಬರಿಗೆ ಐದು ಕ್ವಿಂಟಾಲ್‌ಗಿಂತ ಹೆಚ್ಚು ತೂಕದ 10 ಚೀಲ ಈರುಳ್ಳಿಯನ್ನು ಮಾರಾಟಕ್ಕೆ ಕಳುಹಿ ಸಿದ್ದೆ. ಆದರೆ, ಲೋಡಿಂಗ್, ಸಾರಿಗೆ, ಕೂಲಿ ಮತ್ತು ಇತರ ಶುಲ್ಕಗಳನ್ನು ಕಡಿತ ಗೊಳಿಸಿದ ನಂತರ ನನಗೆ ಕೇವಲ 2.49 ರೂ. ನಿವ್ವಳ ಲಾಭ ಬಂದಿದೆ. ವ್ಯಾಪಾರಿ ನನಗೆ ಕ್ವಿಂಟಲ್‌ಗೆ 100 ರೂ. ದರ ನೀಡಿದ್ದರು. ಅದರಂತೆ ನನಗೆ 512 ಕೆಜಿ ಈರುಳ್ಳಿಗೆ 512 ರೂ. ಸಿಕ್ಕಿದೆʼ ಎಂದಿದ್ದಾರೆ.

‘ಕೂಲಿ, ತೂಕ, ಸಾಗಣೆ ಮತ್ತು ಇತರ ಶುಲ್ಕಗಳ ಮೇಲೆ 509.51 ರೂ. ಕಡಿತದ ನಂತರ, ನಾನು 2.49 ರೂ. ಲಾಭ ಪಡೆದಿದ್ದೇನೆ. ಇದು ನನಗೆ ಮತ್ತು ರಾಜ್ಯದ ಇತರ ಈರುಳ್ಳಿ ಬೆಳೆಗಾರರಿಗೆ ಮಾಡಿದ ಅವಮಾನವಾಗಿದೆ. ಅಂತಹ ಆದಾಯವನ್ನು ಪಡೆದರೆ ನಾವು ಹೇಗೆ ಬದುಕೋದು. ಈರುಳ್ಳಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಮತ್ತು ಹಾನಿಗೊಳಗಾದ ರೈತರಿಗೆ ಪರಿಹಾರ ಸಿಗಬೇಕು ಎಂದು ಅವರು ಹೇಳಿದ್ದಾರೆ.