Friday, 22nd November 2024

ಮನೆಯಿಂದಲೇ ಮತದಾನ ಮಾಡಿದ ಹಿರಿಯ ರಾಜಕೀಯ ನಾಯಕರು

ವದೆಹಲಿ: ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಮತ್ತು ಕೇಂದ್ರದ ಮಾಜಿ ಸಚಿವ ಡಾ.ಮುರಳಿ ಮನೋಹರ್ ಜೋಶಿ ಮುಂತಾದ ಹಿರಿಯ ನಾಯಕರು ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಬಳಸಿಕೊಂಡು ಮತ ಚಲಾಯಿಸಿದ್ದಾರೆ.

ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿಯು ಗುರುವಾರ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗಾಗಿ ಮನೆಯಿಂದಲೇ ಮತದಾನ ವ್ಯವಸ್ಥೆಯನ್ನು ಆರಂಭಿಸಿದ್ದು, ಮೇ 24 ರವರೆಗೆ ಮುಂದುವರಿಯುತ್ತದೆ.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಮಾಜಿ ಕೇಂದ್ರ ಸಚಿವ ಡಾ. ಮುರಳಿ ಮನೋಹರ್ ಜೋಶಿ ಹಾಗೂ ಮಾಜಿ ಉಪ ರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಮೇ 17 ರಂದು ಮನೆಯಿಂದಲೇ ಮತದಾನ ಸೌಲಭ್ಯ ಪಡೆದುಕೊಂಡು ಯಶಸ್ವಿಯಾಗಿ ಮತದಾನ ಮಾಡಿದರು ಎಂದು ಕಚೇರಿ ತಿಳಿಸಿದೆ.

ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ ಶನಿವಾರ ಮತ ಚಲಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊದಲ ದಿನ 1,482 ಮತದಾರರು ಮನೆ ಯಿಂದಲೇ ತಮ್ಮ ಹಕ್ಕು ಚಲಾಯಿಸಿದರು.

ದೆಹಲಿಯಾದ್ಯಂತ ಒಟ್ಟು 5,406 ಹಿರಿಯ ನಾಗರಿಕರು ಮತ್ತು ದಿವ್ಯಾಂಗರು ಲೋಕಸಭಾ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಫಾರ್ಮ್ 12 ಡಿ ಭರ್ತಿ ಮಾಡಿದ್ದಾರೆ. ಈ ಕ್ರಮವು ಇಂತಹ ಮತದಾರರು ಸುಲಭ ಮತ್ತು ಘನತೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹು ದೆಂದು ಖಚಿತಪಡಿಸುತ್ತದೆ.

ಮತದಾನ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವನ್ನು ನಿವಾರಿಸುತ್ತದೆ. ದೆಹಲಿಯಲ್ಲಿ ಮೇ 25 ರಂದು ಚುನಾವಣೆ ನಡೆಯಲಿದೆ.