ಮುಂಬೈ: ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ ಭೂಗತ ಪಾತಕಿ ರಾಜೇಂದ್ರ ಅಲಿಯಾಸ್ ಛೋಟಾ ರಾಜನ್ ಮತ್ತು ಆತನ ಆರು ಮಂದಿ ಸಹಚರರಿಗೆ ಮುಂಬೈ ವಿಶೇಷ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹5 ಲಕ್ಷ ದಂಡ ವಿಧಿಸಿದೆ.
ಮೋಕಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎ.ಟಿ. ವಾಂಖೆಡೆ ಶಿಕ್ಷೆ ವಿಧಿಸಿದ್ದಾರೆ.
2012ರ ಆಗಸ್ಟ್ 28ರಂದು ಬಿಲ್ಡರ್ ಗೋಸಲಿಯ ಅವರು ಇನ್ಫಿನಿಟಿ ಮಾಲ್ನ ಗೇಟ್ನಿಂದ ನಿರ್ಗಮಿಸುವಾಗ ಅವರ ಮೇಲೆ ಮೂವರಿಂದ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಗೋಸಲಿಯ ಅವರ ಗಂಟಲು, ಭುಜ, ಹೊಟ್ಟೆ ಮತ್ತು ಅಂಗೈಗೆ ಗಾಯ ಗಳಾಗಿದ್ದವು. ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ಮೊದಲು ದಾಖಲಾಗಿತ್ತು.
ಮಹಾರಾಷ್ಟ್ರ ಸರ್ಕಾರದ ಕೋರಿಕೆ ನಂತರ ಈ ಪ್ರಕರಣವನ್ನು ಅಪರಾಧ ವಿಭಾಗ ಸಿಐಡಿಗೆ ವರ್ಗಾಯಿಸಲಾಗಿತ್ತು. ನಂತರ ಮಹಾರಾಷ್ಟ್ರದ ಸರ್ಕಾರದ ಕೋರಿಕೆ ಮೇಲೆ ಈ ಪ್ರಕರಣವನ್ನು 2016ರ ಏಪ್ರಿಲ್ 7ರಂದು ಸಿಬಿಐಗೆ ವಹಿಸಲಾಗಿತ್ತು.