ನವದೆಹಲಿ: ಹಿಂದಿ ಹೃದಯಭಾಗದ ರಾಜ್ಯಗಳನ್ನು ”ಗೋಮೂತ್ರ ರಾಜ್ಯಗಳು” ಎಂದು ಹೇಳಿದ್ದು, ಇಲ್ಲಿ ಮಾತ್ರ ಬಿಜೆಪಿ ಚುನಾವಣೆಯಲ್ಲಿ ಗೆಲ್ಲುತ್ತದೆ ಮತ್ತು ದಕ್ಷಿಣ ಭಾರತದಲ್ಲಿ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸೆಂಥಿಲ್‌ಕುಮಾರ್ ಕ್ಷಮೆಯಾಚಿಸಿದ್ದಾರೆ.
ತಮಿಳುನಾಡಿನ ಡಿಎಂಕೆ ಸಂಸದ ಡಿ.ಎನ್.ವಿ.ಸೆಂಥಿಲ್‌ಕುಮಾರ್ ಹೇಳಿಕೆ ವಿವಾದ ಹುಟ್ಟುಹಾಕಿತ್ತು.
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಎನ್‌ವಿ ಸೆಂಥಿಲ್‌ಕುಮಾರ್, ”ಹಿಂದಿ ರಾಜ್ಯಗಳು ಎಂದರೆ, ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳು ಎಂದು ಕರೆಯುವ ರಾಜ್ಯಗಳಲ್ಲಿ ಮಾತ್ರ ಚುನಾವಣೆ ಗಳನ್ನು ಗೆಲ್ಲುವುದು ಬಿಜೆಪಿಯ ಶಕ್ತಿಯಾಗಿದೆ ಎಂದು ಈ ದೇಶದ ಜನರು ಯೋಚಿಸಬೇಕು” ಎಂದು ಹೇಳಿದ್ದಾರೆ.
ಇತ್ತೀಚಿಗೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವಿನ ಬೆನ್ನಲ್ಲೇ ಡಿಎಂಕೆ ಸಂಸದ ಈ ಹೇಳಿಕೆ ನೀಡಿದ್ದಾರೆ.
ಮುಂದುವರೆದು, “ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಏನಾಗುತ್ತದೆ ಎಂಬುದರ ಎಲ್ಲ ಫಲಿತಾಂಶಗಳನ್ನು ನೀವು ನೋಡುತ್ತೀರಿ. ನಾವು ಅಲ್ಲಿ ತುಂಬಾ ಬಲಶಾಲಿಯಾಗಿದ್ದೇವೆ. ಈ ಎಲ್ಲ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವ ಆಯ್ಕೆ ಯನ್ನು ನೀವು ಹೊಂದಿದ್ದರೆ ನಾವು ಆಶ್ಚರ್ಯಪಡುವುದಿಲ್ಲ. ಇದರಿಂದ ನೀವು ಪರೋಕ್ಷ ಅಧಿಕಾರಕ್ಕೆ ಬರಬಹುದು. ಏಕೆಂದರೆ, ನೀವು ಅಲ್ಲಿಗೆ ಕಾಲಿಡುವ ಮತ್ತು ಎಲ್ಲ ದಕ್ಷಿಣದ ರಾಜ್ಯಗಳ ಮೇಲೆ ಹಿಡಿತ ಸಾಧಿಸುವ ಕನಸು ಕಾಣಲು ಸಹ ಸಾಧ್ಯವಿಲ್ಲ” ಎಂದಿದ್ದಾರೆ.
ಸೆಂಥಿಲ್‌ಕುಮಾರ್ ಈ ಹೇಳಿಕೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
”ನಮ್ಮ ಉತ್ತರ ಭಾರತದ ಸ್ನೇಹಿತರನ್ನು ಪಾನಿಪುರಿ ಮಾರಾಟಗಾರರು, ಶೌಚಾಲಯ ಕಟ್ಟುವವರು ಇತ್ಯಾದಿ ಎಂದು ಕರೆದು… ಈಗ ಐ.ಎನ್.ಡಿ.ಐ.ಎ. ಮೈತ್ರಿಕೂಟದ ಡಿಎಂಕೆ ಸಂಸದ, ಗೋಮೂತ್ರದ ಟೀಕೆ ಮಾಡಿದ್ದಾರೆ. ಡಿಎಂಕೆಯ ದುರಾಡಳಿತದಿಂದಾಗಿ ಚೆನ್ನೈ ಮುಳುಗುತ್ತಿದೆ. ಡಿಎಂಕೆಯ ದುರಹಂಕಾರವೇ ಅವರ ಪತನಕ್ಕೂ ಪ್ರಮುಖ ಕಾರಣವಾಗಲಿದೆ” ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.