Saturday, 14th December 2024

ಪೂರ್ವ ಗೋದಾವರಿ: ವ್ಯಾನ್ ಹಳ್ಳಕ್ಕೆ ಉರುಳಿ ಏಳು ಮಂದಿ ಸಾವು

ಅಮರಾವತಿ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಶುಕ್ರವಾರ ವ್ಯಾನೊಂದು ಹಳ್ಳಕ್ಕೆ ಉರುಳಿ ಏಳು ಮಂದಿ ಮೃತಪಟ್ಟು, ಇತರ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ಐವರು ಸಾವಿಗೀಡಾಗಿದ್ದು, ಇನ್ನಿಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಾನ್ ಬೆಟ್ಟ ಪ್ರದೇಶದಲ್ಲಿ ಇಳಿಜಾರಿನ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಬ್ರೇಕ್ ವಿಫಲಗೊಂಡು ವಾಹನವು ರಸ್ತೆ ಬದಿ ಕಂದಕಕ್ಕೆ ಉರುಳಿ ಈ ದುರಂತ ಸಂಭವಿಸಿದೆ. ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಭಾಗವ ಹಿಸಿ 20 ಜನರು ವ್ಯಾನ್‍ನಲ್ಲಿ ತಮ್ಮ ಸ್ವಗ್ರಾಮ ಗೋಕಾವರಂಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.