Thursday, 12th December 2024

ಅಕ್ಷಯ್ ಶಿಂಧೆಯ ಪೊಲೀಸ್ ಕಸ್ಟಡಿ ಆ.26ರವರೆಗೆ ವಿಸ್ತರಣೆ, ಇಂಟರ್ನೆಟ್ ಸೇವೆ ಸ್ಥಗಿತ

ಮುಂಬೈ: ಮಹಾರಾಷ್ಟ್ರ ಥಾಣೆ ಜಿಲ್ಲೆಯ ಬದ್ಲಾಪುರ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಶಿಶುವಿಹಾರದಲ್ಲಿ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಜನರು ಬದ್ಲಾಪುರ್ ರೈಲು ನಿಲ್ದಾಣದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ಒಂದು ದಿನದ ನಂತರ ಬುಧವಾರ ಹೆಚ್ಚಿನ ಶಾಲೆಗಳನ್ನು ಮುಚ್ಚಲಾಗಿದೆ. ಲೈಂಗಿಕ ದೌರ್ಜನ್ಯವೆಸಗಿದ ಶಾಲೆಯ ಸ್ವೀಪರ್, ಆರೋಪಿ ಅಕ್ಷಯ್ ಶಿಂಧೆ ಪ್ರಕರಣ ಕೈಗೆತ್ತಿಕೊಳ್ಳದಿರಲು ಕಲ್ಯಾಣ್ ಬಾರ್ ಅಸೋಸಿಯೇಷನ್ ನಿರ್ಧರಿಸಿದೆ.
ಲೈಂಗಿಕ ದೌರ್ಜನ್ಯದ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮಾಡಿದ್ದು ಶಾಲಾ ಕಟ್ಟಡವನ್ನು ಧ್ವಂಸಗೊಳಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ರೈಲು ಸಂಚಾರಕ್ಕೆ ಹಳಿಗಳನ್ನು ತೆರವುಗೊಳಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.

ದೂರಿನ ಪ್ರಕಾರ ಅಕ್ಷಯ್ ಶಿಂಧೆ ಶಾಲೆಯ ಶೌಚಾಲಯದಲ್ಲಿ ಬಾಲಕಿಯರನ್ನು ನಿಂದಿಸಿದ್ದಾನೆ. ಘಟನೆಯ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು, ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ನ್ನು ಅಮಾನತುಗೊಳಿಸಿದೆ.

ಬುಧವಾರ, ಸ್ಥಳೀಯ ನ್ಯಾಯಾಲಯವು ಅಕ್ಷಯ್ ಶಿಂಧೆಯ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 26 ರವರೆಗೆ ವಿಸ್ತರಿಸಿತು. ಕಳೆದ ವಾರ ಘಟನೆ ನಡೆದ ಶಾಲೆ ಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಿಗಿ ಪೊಲೀಸ್ ಭದ್ರತೆಯ ನಡುವೆ ಇಂದು ಬೆಳಗ್ಗೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಮ್ಯಾಜಿ ಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಆಗಸ್ಟ್ 26 ರವರೆಗೆ ಅವರ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಲು ನ್ಯಾಯಾಲಯ ಆದೇಶಿಸಿದೆ.