ರಾಯ್‌ಪುರ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ಗೆ ಜೀವ ಬೆದರಿಕೆ(Shah Rukh Khan death threat) ಹಾಕಿದ ಆರೋಪದ ಮೇಲೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ವಕೀಲ ಫೈಜನ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಕಳೆದ ವಾರ ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಮಾಡಿ ಶಾರುಖ್ ಖಾನ್ ಅವರನ್ನು ಬೆದರಿಸಿ ₹50 ಲಕ್ಷ ಬೇಡಿಕೆ ಇಟ್ಟಿದ್ದ.
ಇನ್ನು ಬಂಧಿತ ಆರೋಪಿ ಫೈಜನ್ ಖಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 308(4) (ಸಾವಿನ ಬೆದರಿಕೆ ಅಥವಾ ಗಂಭೀರ ಗಾಯದ ಸುಲಿಗೆ) ಮತ್ತು 351(3)(4) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರವೇ ಈತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆದರೆ ತನ್ನ ಫೋನ್ ಕಳೆದು ಹೋಗಿದೆ. ಅದನ್ನು ಬಳಸಿಕೊಂಡು ಬೇರೆ ಯಾರೋ ಕರೆ ಮಾಡಿದ್ದಾರೆ ಎಂದು ಆತ ಹೇಳಿದ್ದ. ಇದೀಗ ಈತನೇ ಈ ಕರೆ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಆತನನ್ನು ಅರೆಸ್ಟ್ ಮಾಡಲಾಗಿದೆ.
ಏನಿದು ಪ್ರಕರಣ?
ನ. 5 ರಂದು ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಮಾಡಿ ಶಾರುಖ್ ಖಾನ್‌ಗೆ ಕೊಲೆ ಬೆದರಿಕೆ ಹಾಗೂ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನಂತರ ಕೊಲೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭ ಮಾಡಿದ್ದರು. ಬಳಿಕ ಕರೆ ಬಂದಿರುವ ಪೋನ್ ಸಂಖ್ಯೆಯನ್ನು ಪತ್ತೆ ಮಾಡಲಾಗಿತ್ತು. ಛತ್ತೀಸ್‌ಗಢದ ರಾಯ್‌ಪುರದ ವಕೀಲ ಫೈಜಾನ್ ಖಾನ್ (Faizan Khan) ಮೊಬೈಲ್ ಸಂಖ್ಯೆಯಿಂದ ಈ ಕರೆ ಮಾಡಲಾಗಿತ್ತು. 1994 ರ ಅಂಜಾಂ (film Anjaam) ಚಿತ್ರದಲ್ಲಿ ಜಿಂಕೆ ಬೇಟೆಯ ಸಂಭಾಷಣೆಯ ಕುರಿತು ಶಾರುಖ್ ವಿರುದ್ಧ ಇದೇ ಫೈಜಾನ್ ಖಾನ್ ದೂರು ದಾಖಲಿಸಿದ್ದರು. ಅವರ ಮೊಬೈಲ್ ಸಂಖ್ಯೆಯಿಂದಲೇ ಶಾರುಖ್‌ಗೆ ಬೆದರಿಕೆ ಕರೆ ಹೋಗಿತ್ತು.
ಮೊಬೈಲ್ ಸಂಖ್ಯೆ ಪತ್ತೆ ಮಾಡಿದ ಪೊಲೀಸರು ಹೆಚ್ಚಿನ ತಿನಿಖೆಗಾಗಿ ಫೈಜಾನ್ ಖಾನ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಅವರು ತಮ್ಮ ಮೊಬೈಲ್ ಕಳುವಾಗಿದೆ ನಾನು ನ. 2ರಂದೇ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೂ ಬೆದರಿಕೆ ಕರೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದ.
ವಿಚಾರಣೆಯ ನಂತರ ಮಾತನಾಡಿದ ಅವರು “ನನ್ನ ಫೋನ್ ಕಳೆದುಹೋಗಿದೆ, ನಾನು ಈಗಾಗಲೇ ದೂರು ದಾಖಲಿಸಿದ್ದೇನೆ. ಇಂದು, ಮುಂಬೈ ಪೊಲೀಸರು ನನ್ನ ಮನೆಗೆ ಬಂದರು ಮತ್ತು ಅವರು ಕರೆ ಬಗ್ಗೆ ಕೇಳುತ್ತಿದ್ದಾರೆ. ನಾನು ಅವರಿಗೆ ‘ನಾನು ವಕೀಲ, ನನ್ನ ಫೋನ್ ಕಳೆದುಹೋಗಿದೆ ಮತ್ತು ಯಾರು ಕರೆ ಮಾಡಿದ್ದಾರೆ ಎಂದು ನನಗೆ ತಿಳಿದಿಲ್ಲ.ತನ್ನ ಫೋನ್ ಸಂಖ್ಯೆಗೆ ಲಿಂಕ್ ಮಾಡಿದ ವಾಟ್ಸಾಪ್ ಅನ್ನು ಬೇರೆ ಫೋನ್‌ನಲ್ಲಿ ಬಳಸಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ನನ್ನ ಮೊಬೈಲ್ ಸಂಖ್ಯೆಯಿಂದ ಕರೆ ಹೋಗಿರುವುದು ನಿಜ, ಆದರೆ ಯಾರು ಮಾಡಿದ್ದಾರೆಂದು ತಿಳಿದಿಲ್ಲ, ನಾನು ಪೊಲೀಸರಲ್ಲಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಎಂದು ವಿನಂತಿಸಿಕೊಂಡಿದ್ದೇನೆ ಎಂದು ಹೇಳಿದ್ದ.
ಈ ಸುದ್ದಿಯನ್ನೂ ಓದಿ: Kolkata Horror: ಕೋಲ್ಕತ್ತಾ ವೈದ್ಯೆ ಕೊಲೆ ಹಿಂದೆ ಇದ್ಯಾ ಪೊಲೀಸ್ ಕಮಿಷನರ್ ಕೈವಾಡ? ಮಾಧ್ಯಮದೆದುರು ಆರೋಪಿ ಕಿರುಚಾಡಿದ್ದೇಕೆ? ವಿಡಿಯೊ ವೈರಲ್