ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಬುಧವಾರ ಪ್ರಕಟಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಸೂಕ್ಷ್ಮ ಮತ್ತು ಸಣ್ಣ ಉದ್ಯಮ (Micro and Small Enterprises)ಗಳ ಸಾಲದ ಮೇಲಿನ ಫಾರ್ಕ್ಲೋಸರ್ ಶುಲ್ಕ (Foreclosure charges)ವನ್ನು ಹಿಂಪಡೆಯುವ ಕುರಿತು ಪ್ರಸ್ತಾವಿಸಿದ್ದಾರೆ.
ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಆರ್ಬಿಐ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ. ವ್ಯವಹಾರೇತರ ಉದ್ದೇಶಗಳಿಗಾಗಿ ವೈಯಕ್ತಿಕ ಸಾಲಗಾರರಿಗೆ ಮಂಜೂರಾದ ಯಾವುದೇ ಫ್ಲೋಟಿಂಗ್ ದರದ ಅವಧಿಯ ಸಾಲದ ಮೇಲೆ ಫಾರ್ಕ್ಲೋಸರ್ ಅಥವಾ ಪೂರ್ವಪಾವತಿ ದಂಡಗಳನ್ನು ವಿಧಿಸಲು ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ಅನುಮತಿ ಇಲ್ಲ. ಈ ನಿಯಮವನ್ನು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸಾಲಗಳಿಗೂ ವಿಸ್ತರಿಸಲು ಆರ್ಬಿಐ ಮುಂದಾಗಿದೆ.
#WATCH | Mumbai | RBI Governor Shaktikanta Das says, "UPI has transformed India's financial landscape by making digital payments accessible and inclusive through continuous innovation and adaptation. To further encourage wider adoption of UPI and make it more inclusive, it has… pic.twitter.com/T5i9aKiPUW
— ANI (@ANI) October 9, 2024
ಕೆಲವು ಬ್ಯಾಂಕುಗಳು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಮೇಲೆ ಯಾವುದೇ ಮುಕ್ತಾಯ ಶುಲ್ಕವನ್ನು ವಿಧಿಸುವುದಿಲ್ಲವಾದರೂ, ಕೆಲವು ಬ್ಯಾಂಕುಗಳು ವಿಧಿಸುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಫಾರ್ಕ್ಲೋಸರ್ ಶುಲ್ಕಗಳು ತೆರಿಗೆಗಳನ್ನು ಹೊರತುಪಡಿಸಿ ಪೂರ್ವ ಪಾವತಿ ಮೊತ್ತದ ಶೇ. 2-5ರ ನಡುವೆ ಇರುತ್ತದೆ.
“ಸಾಲದಾತರ ಪಾರದರ್ಶಕತೆ ಪ್ರದರ್ಶಿಸಲು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ (MSEs) ಸಾಲಗಳನ್ನೂ ಹೊಸ ನಿಯಮದ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕರಡು ಸುತ್ತೋಲೆಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದುʼʼ ಎಂದು ಶಕ್ತಿಕಾಂತ ದಾಸ್ ವಿವರಿಸಿದ್ದಾರೆ.
ರೆಪೋ ದರ ಯಥಾಸ್ಥಿತಿ
ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿಯೇ ಮುಂದುವರಿಸಲು ನಿರ್ಧರಿಸಿದೆ. ರೆಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬ ಮಾನಿಟರಿ ಪಾಲಿಸಿ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ತಿಳಿಸಿದ್ದಾರೆ. ಈ ಮೂಲಕ ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.
ಹಣಕಾಸು ನೀತಿಯಲ್ಲಿ ಬದಲಾವಣೆ
ಜತೆಗೆ ಆರ್ಬಿಐ ತನ್ನ ಹಣಕಾಸು ನೀತಿಯ ನಿಲುವನ್ನು ನ್ಯೂಟ್ರಲ್ಗೆ ಬದಲಾಯಿಸಿದೆ. ಈ ಮೊದಲು ಹಲವು ತಿಂಗಳಿಂದ ಆರ್ಬಿಐ ವಿತ್ಡ್ರಾಯಲ್ ಆಫ್ ಅಕಾಮೊಡೇಶನ್ ನಿಲುವನ್ನು ಹೊಂದಿತ್ತು. ಈಗ ಆ ನೀತಿಯನ್ನು ನ್ಯೂಟ್ರಲ್ಗೆ ಬದಲಿಸಿದೆ. ನ್ಯೂಟ್ರಲ್ ಹಣಕಾಸು ನೀತಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ನಿಲುವುಗಳನ್ನು ತೆಗೆದುಕೊಳ್ಳುವುದಕ್ಕೆ ಆದ್ಯತೆ ಕೊಡಲಾಗುತ್ತದೆ. ಅಂದರೆ, ಹಣದುಬ್ಬರ ಏರುತ್ತಿದೆ ಎಂದರೆ ರೆಪೋ ದರವನ್ನು ಹೆಚ್ಚಿಸಬಹುದು. ಹಣದುಬ್ಬರ ಕಡಿಮೆ ಆಗುತ್ತಿದೆ ಎಂದರೆ ರೆಪೋ ದರ ಕಡಿಮೆಗೊಳಿಸಬಹುದು.
ಈ ಸುದ್ದಿಯನ್ನೂ ಓದಿ: RBI MPC Meet October 2024: ರೆಪೋ ದರ ಯಥಾಸ್ಥಿತಿ; ಗೃಹಸಾಲದ ಇಎಂಐ ಇಳಿಕೆ ಇಲ್ಲ
ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ಎರಡು ತಿಂಗಳಿಗೊಮ್ಮೆ ನಡೆಸುವ ಮಾನಿಟರಿ ಪಾಲಿಸಿ ಕಮಿಟಿ ಸಭೆ ಅಕ್ಟೋಬರ್ 7ರಂದು ಆರಂಭವಾಗಿತ್ತು. 3 ದಿನ ನಡೆದ ಈ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.