ಭೋಪಾಲ್: ಮಧ್ಯಪ್ರದೇಶ ಸರ್ಕಾರವು ಧಾರ್ಮಿಕ ಗುರು ಮತ್ತು ತತ್ವಜ್ಞಾನಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು 2,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಮುಂದಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್ ನ ಟ್ರಸ್ಟಿಗಳ ಮಂಡಳಿಯ ಸಭೆಯನ್ನು ಉದ್ದೇಶಿಸಿ ಯೋಜನೆಯ ಕುರಿತು ಚರ್ಚಿಸಿದ್ದಾರೆ. ಸ್ವಾಮಿ ಅವೇಧಶಾ ನಂದ ಗಿರಿ ಜಿ ಮಹಾರಾಜ್ ಸೇರಿದಂತೆ ಪ್ರಮುಖ ಸಂತರು ಮತ್ತು ಟ್ರಸ್ಟ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಬಜೆಟ್ ನಲ್ಲಿ ಹಣ ಮಂಜೂರು ಮಾಡಿದ ನಂತರ ಮಾತ್ರ ಚರ್ಚಿಸುವುದಾಗಿ ಹೇಳಿದೆ.
ಓಂಕಾರೇಶ್ವರದಲ್ಲಿ 108 ಅಡಿ ಬಹುಲೋಹದ ಆದಿಶಂಕರ ಪ್ರತಿಮೆ ಮ್ಯೂಸಿಯಂ ಮತ್ತು ಅಂತಾರಾಷ್ಟ್ರೀಯ ವೇದಾಂತ ಸಂಸ್ಥಾನ ನಿರ್ಮಿಸುವ ಯೋಜನೆಯು ರಾಜ್ಯವನ್ನು ಪ್ರಪಂಚದೊಂದಿಗೆ ಸಂಪರ್ಕಿಸು ತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಏಕತೆಯ ಪ್ರತಿಮೆ ಎಂದು ಕರೆಯಲ್ಪಡುವ ಪ್ರತಿಮೆಯ ಎತ್ತರವು 108 ಅಡಿಯಾಗಿರಲಿದ್ದು, 54 ಅಡಿ ಎತ್ತರದ ವೇದಿಕೆಯಲ್ಲಿ ಸ್ಥಾಪಿಸ ಲಾಗುವುದು. ಮಾಂಧಾತ ಪರ್ವತದ 7.5 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿಮೆ ಮತ್ತು ಶಂಕರ ಮ್ಯೂಸಿಯಂ ಸ್ಥಾಪಿಸಲಾಗುವುದು. ನರ್ಮದಾ ನದಿಯ ಇನ್ನೊಂದು ಬದಿಯಲ್ಲಿ 5 ಹೆಕ್ಟೇರ್ ಪ್ರದೇಶದಲ್ಲಿ ಗುರುಕುಲಂ ಮತ್ತು 10 ಹೆಕ್ಟೇರ್ ಪ್ರದೇಶದಲ್ಲಿ ಆಚಾರ್ಯ ಶಂಕರ್ ಅಂತಾ ರಾಷ್ಟ್ರೀಯ ಅದ್ವೈತ ವೇದಾಂತ ಸಂಸ್ಥಾನವನ್ನು ಅಭಿವೃದ್ಧಿಪಡಿಸಲಾಗುವುದು.
ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಜಿತು ಪಟ್ವಾರಿ ಮಾತನಾಡಿ, ‘ರಾಜ್ಯದಲ್ಲಿ ಈಗಾಗಲೇ 2.56 ಲಕ್ಷ ಕೋಟಿ ರೂ. ಸಾಲ ಮರುಪಾವತಿಯಾಗಬೇಕಿದೆ ಆದರೆ ಶಿವರಾಜ್ ಸರ್ಕಾರ ಒಂದಲ್ಲ ಒಂದು ನೆಪದಲ್ಲಿ ನಿತ್ಯವೂ ಸಾಲ ಪಡೆಯುತ್ತಿದೆ, ಈಗ 48,000 ಕೋಟಿ ರೂ ಸಾಲ ಪಡೆಯಲು ನಿರ್ಧರಿಸಿದೆ” ಎಂದಿದ್ದಾರೆ.