ಹೊಸದಿಲ್ಲಿ: ಛತ್ ಗೀತೆ (Chhatth songs)ಗಳ ಮೂಲಕ ಜನಪ್ರಿಯರಾಗಿದ್ದ, ಪದ್ಮ ಭೂಷಣ ಪ್ರಶಸ್ತಿ ಪರಸ್ಕೃತ ಜಾನಪದ ಗಾಯಕಿ ಶಾರದಾ ಸಿನ್ಹಾ (Sharda Sinha) ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರನ್ನು ಚಿಕಿತ್ಸೆಗಾಗಿ ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಹಲೋಹ ತ್ಯಜಿಸಿದ್ದಾರೆ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
सुप्रसिद्ध लोक गायिका शारदा सिन्हा जी के निधन से अत्यंत दुख हुआ है। उनके गाए मैथिली और भोजपुरी के लोकगीत पिछले कई दशकों से बेहद लोकप्रिय रहे हैं। आस्था के महापर्व छठ से जुड़े उनके सुमधुर गीतों की गूंज भी सदैव बनी रहेगी। उनका जाना संगीत जगत के लिए एक अपूरणीय क्षति है। शोक की इस… pic.twitter.com/sOaLvUOnrW
— Narendra Modi (@narendramodi) November 5, 2024
ಶಾರದಾ ಸಿನ್ಹಾ ಅವರು 2018ರಿಂದಲೂ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾರದಾ ಸಿನ್ಹಾ ಅವರ ಕುಟುಂಬವನ್ನು ಸಂಪರ್ಕಿಸಿದ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ನೆರವು ನೀಡುವ ಭರವಸೆಯನ್ನೂ ನೀಡಿದ್ದರು.
ಯಾರು ಈ ಶಾರದಾ ಸಿನ್ಹಾ?
ಬಿಹಾರ ಮೂಲದ ಶಾರದಾ ಸಿನ್ಹಾ ಅವರು ಬಿಹಾರದ ಕೋಗಿಲೆ ಎಂದೇ ಜನಪ್ರಿಯರಾಗಿದ್ದರು. ಅವರು ಬಿಹಾರದ ಜಾನಪದ ಸಂಗೀತ ಮತ್ತು ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಸಾಂಪ್ರದಾಯಿಕ ವಿವಾಹ ಮತ್ತು ಛತ್ ಹಾಡುಗಳನ್ನು ಜನಪ್ರಿಯಗೊಳಿಸಿದ ಖ್ಯಾತಿ ಇವರದು. 1952ರ ಅ. 1ರಂದು ಬಿಹಾರದಲ್ಲಿ ಜನಿಸಿದ ಶಾರದಾ ಸಿನ್ಹಾ ಅವರು ಮೈಥಿಲಿ ಮತ್ತು ಭೋಜ್ಪುರಿ ಭಾಷೆಗಳಲ್ಲಿನ ಜಾನಪದ ಹಾಡುಗಳನ್ನು ಎಲ್ಲೆಡೆ ಪಸರಿಸಿದ್ದಾರೆ. ಧಾರ್ಮಿಕ ಮತ್ತು ವಿವಾಹದ ಜಾನಪದ ಗೀತೆಗಳು ಸೇರಿದಂತೆ ಹಲವು ವಿಧಗಳ ಅನೇಕ ಹಾಡುಗಳನ್ನು ಪ್ರಸ್ತುತಪಡಿಸಿದ್ದಾರೆ. 2016ರಲ್ಲಿ ಬಿಡುಗಡೆಯಾದ ʼಪಹೇಲೆ ಪಹಿಲ್ ಹಮ್ ಕಯೇನಿ ಛತ್ʼ ಹಾಡನ್ನು ಇಂದಿಗೂ ಅನೇಕರು ಗುನುಗುತ್ತಾರೆ.
ಬಾಲಿವುಡ್‌ನಲ್ಲಿಯೂ ಛಾಪು
ಮೊದಲೇ ಹೇಳಿದಂತೆ ಜಾನಪ ಸಂಗೀತದ ಜತೆಗೆ ಬಾಲಿವುಡ್‌ನ ಹಾಡಿಗೂ ಧ್ವನಿಯಾಗಿದ್ದರು. ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ 1989ರ ಬ್ಲಾಕ್ ಬ್ಲಸ್ಟರ್ ಚಿತ್ರ ʼಮೈನೆ ಪ್ಯಾರ್ ಕಿಯಾʼದ ʼಕಹೆ ತೋ ಸೆ ಸಜ್ನʼ ಹಾಡಿಗೆ ಧ್ವನಿ ನೀಡಿದ್ದರು. ಅನುರಾಗ್ ಕಶ್ಯಪ್ ಅವರ ʼಗ್ಯಾಂಗ್ಸ್ ಆಫ್ ವಾಸೇಪುರ್ʼ ಚಿತ್ರದಲ್ಲಿನ ʼತಾರ್ ಬಿಜ್ಲಿʼ ಹಾಡು ಕೂಡ ಗಮನ ಸೆಳೆದಿತ್ತು. ಇದಲ್ಲದೆ ʼಹಮ್ ಆಪ್ಕೆ ಹೈ ಕೌನ್ʼನ ʼಬಾಬುಲ್ ಜೋ ತುಮ್ʼ ಹಾಡು ಕೂಡ ಇಂದಿಗೂ ಪ್ರೇಕ್ಷಕರ ಫೆವರೇಟ್ ಎನಿಸಿಕೊಂಡಿದೆ. ಇತ್ತೀಚೆಗೆ ತೆರೆಕಂಡ ಒಟಿಟಿ ಸಿರೀಸ್ ʼಮಹಾರಾಣಿ ಸೀಸನ್ 2ʼಗಾಗಿ ಹಾಡಿರುವ ʼನಿರ್ಮೋಹಿಯಾʼ ಕೂಡ ಹಿಟ್ ಲಿಸ್ಟ್ ಸೇರಿತ್ತು.
Everyone's Favourite Folk Singer and Padma Bhushan awardee #ShardaShinha is no more.
— Voice of Hindus (@Warlock_Shabby) November 5, 2024
Om Shanti 🙏🏻💔 pic.twitter.com/4RmcgpB4ZK
ಸಂಗೀತಕಕ್ಕೆ ನೀಡಿರುವ ಅನನ್ಯ ಕೊಡುಗೆಯನ್ನು ಪರಿಗಣಿಸಿ ಇವರಿಗೆ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ. 1991ರಲ್ಲಿ ಶಾರದಾ ಸಿನ್ಹಾ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. 2018ರಲ್ಲಿ ಭಾರತದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಭೂಷಣ ಇವರನ್ನು ಅರಸಿಕೊಂಡು ಬಂದಿತ್ತು. ಇತ್ತೀಚೆಗಷ್ಟೇ ಶಾರದಾ ಅವರ ಪತಿ ಬ್ರಜ್‌ಕಿಶೋರ್ ಸಿನ್ಹಾ ಅಸುನೀಗಿದ್ದರು. ಅದಾದ ಬಳಿಕ ಶಾರದಾ ಸಿನ್ಹಾ ಮಾನಸಿಕವಾಗಿ ಬಹಳಷ್ಟು ಕುಗ್ಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Rohit Bal: ಜನಪ್ರಿಯ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ನಿಧನ