Saturday, 23rd November 2024

ಮೇ 5ರಿಂದ ಅಮಿತ್ ಷಾ ಪಶ್ಚಿಮ ಬಂಗಾಳ ಪ್ರವಾಸ

#AmitShaw

ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮೇ 5ರಿಂದ ಮೂರು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳಲಿದ್ದಾರೆ.

ಮೇ 5ರಂದು ರಾತ್ರಿ ಕೋಲ್ಕತ್ತಾಗೆ ತೆರಳಿರುವ ಷಾ, ಮೊದಲಿಗೆ ಉತ್ತರ 24 ಪರಗಣ ಜಿಲ್ಲೆಯ ಹಿಂಗಲ್ ಗಂಜ್ ಪ್ರದೇಶದಲ್ಲಿ ಬಿಎಸ್‍ಎಫ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತಿದ್ದು, ಭಾರತ -ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್‍ಎಫ್‍ನ ಮಾಡಿಕೊಂಡಿರುವ ಸಿದ್ಧತೆಗಳು ಮತ್ತು ಕಾರ್ಯ ವೈಖರಿಯ ಕುರಿತು ಪರಿಶೀಲನೆ ನಡೆಸಲಿದ್ದಾರೆ.

ಮಧ್ಯಾಹ್ನ ಸಿಲಿಗುರಿಯಲ್ಲಿ ನಡೆಯುವ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೇ 6ರಂದು ಕೂಚ್ ಬೆಹಾರ್‍ನ ಮೂರು ಬಿಘಾ ಕಾರಿಡಾರ್‍ನಲ್ಲಿ ಬಿಎಸ್‍ಎಫ್‍ನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಭಾರೀ ಮೊತ್ತದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಚುನಾವಣಾ ಕಾರ್ಯತಂತ್ರ ಮತ್ತು ಪಕ್ಷದ ಆಂತರಿಕ ಕಚ್ಚಾಟಕ್ಕೆ ಕಡಿವಾಣ ಹಾಕಲು ಷಾ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಉತ್ತರಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ, ಬಂಗಾಳದಲ್ಲಿ ಪಕ್ಷದ ಕಾರ್ಯಕರ್ತರ ನೈತಿಕತೆ ಹೆಚ್ಚಾಗಿದೆ. ಆದರೆ ಅದನ್ನು ಮತ್ತಷ್ಟು ಬಲಪಡಿಸಬೇಕಿದೆ. ಅಮಿತ್ ಷಾ ಅವರ ರಾಜ್ಯ ಭೇಟಿ ಪಕ್ಷ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ರಾಜ್ಯ ಘಟಕ ತಿಳಿಸಿದೆ.

ಇನ್ನೆರಡು ವರ್ಷಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಂಗಾಳದಲ್ಲಿ ಅನಿರೀಕ್ಷಿತವಾಗಿ 18 ಸ್ಥಾನಗಳನ್ನು ಗೆದ್ದಿತ್ತು, ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಗೆಲುವು ಬಿಜೆಪಿಗೆ ಆಘಾತ ತಂದೊಡ್ಡಿತ್ತು.