Friday, 22nd November 2024

Shimla Mosque Row: ಶಿಮ್ಲಾದ ಸಂಜೌಲಿ ಮಸೀದಿಯ ಅಕ್ರಮ ನಿರ್ಮಾಣ ತೆರವು ಶುರು; ಏನಿದು ವಿವಾದ?

shimla

ಶಿಮ್ಲಾ: ಹಿಮಾಚಲಪ್ರದೇಶದ ಸಂಜೌಲಿ ಮಸೀದಿಯ ಅಕ್ರಮ ನಿರ್ಮಾಣವನ್ನು ಸ್ವತಃ ಮಸೀದಿ ಮಂಡಳಿಯೇ ಕೆಡವಲು(Shimla Mosque Row) ಮುಂದಾಗಿದೆ. ಮುನ್ಸಿಪಾಲ್‌ ಕಾರ್ಪೋರೇಷನ್‌ ಕೋರ್ಟ್‌ ಆದೇಶದ ಬೆನ್ನಲ್ಲೇ ಈ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಇನ್ನು ಈ ಬಗ್ಗೆ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಲಕ್ಕಿ ಮೊಹಮ್ಮದ್‌ ಲತೀಫ್‌ ನೇಗಿ ಪ್ರತಿಕ್ರಿಯಿಸಿದ್ದು, ಐದನೇ ಅಂತಸ್ತಿನ ಸಂಜೌಲಿ ಮಸೀದಿಯನ್ನು ಅಕ್ರಮ ನಿರ್ಮಾಣವನ್ನು ಕೆಡವಲು ಪ್ರಾರಂಭಿಸಿದ್ದೇವೆ. ಇದಕ್ಕೆ ಹಿಮಾಚಲ ಪ್ರದೇಶ ವಕ್ಫ್‌ ಬೋರ್ಡ್‌ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಹಣಕಾಸಿನ ಸಮಸ್ಯೆಯಿಂದಾಗಿ ಈ ಧ್ವಂಸ ಪ್ರಕ್ರಿಯೆ ಕನಿಷ್ಠ ಐದು ತಿಂಗಳುಗಳ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದು ನೇಗಿ ಹೇಳಿದ್ದಾರೆ. ಮಸೀದಿ ನಿರ್ಮಾಣಕ್ಕೆ ಇಡೀ ಸಮುದಾಯ ಭಾರೀ ಸಹಕಾರ ನೀಡಿತ್ತು. ಆದರೆ ಧ್ವಂಸ ಪ್ರಯತ್ನಗಳಿಗೆ ಹಣಕಾಸಿನ ನೆರವಿನ ಕೊರತೆ ಇದೆ ಎಂದು ನೇಗಿ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂದಿನಿಂದ ಅಕ್ರಮ ಕಟ್ಟಡ ಮತ್ತು ಅದರ ಅಕ್ರಮ ಭಾಗವನ್ನು ಸ್ವಯಂಪ್ರೇರಿತವಾಗಿ ಕೆಡವಲು ಅವರು ಕೈಗೊಂಡಿರುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಈ ವಿಚಾರ ಪಾಲಿಕೆ ಆಯುಕ್ತರ ನ್ಯಾಯಾಲಯದಲ್ಲಿರುವುದರಿಂದ ಮಸೀದಿ ಕೆಡವಲು ಬೇಕಾಗಿರುವ ಕಾಲಾವಕಾಶದ ಬಗ್ಗೆ ಅಲ್ಲಿಯೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಅಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು, ಈ ವಿಚಾರದಲ್ಲಿ ನಾನೇನೂ ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮುನ್ಸಿಪಲ್ ಕಾರ್ಪೊರೇಷನ್ ಕೋರ್ಟ್ ಅಕ್ಟೋಬರ್ 5 ರಂದು ಮಸೀದಿಯ ಮೂರು ಅನಧಿಕೃತ ಅಂತಸ್ತುಗಳನ್ನು ಕೆಡವಲು ಆದೇಶಿಸಿತು, ಸಂಜೌಲಿ ಮಸೀದಿ ಸಮಿತಿಗೆ ಎರಡು ತಿಂಗಳ ಕಾಲಾವಕಾಶ ನೀಡಿತು. ಇದೀಗ ಮಸೀದು ಸಮಿತಿ ಮಸೀದಿ ಧ್ವಂಸ ಪ್ರಕ್ರಿಯೆಗೆ ಮತ್ತಷ್ಟು ಕಾಲಾವಕಾಶ ಬೇಕೆಂದು ಅಭಿಪ್ರಾಯಪಟ್ಟಿದ್ದು, ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ.

ನೇಗಿ ಅವರು ಶಿಮ್ಲಾದ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಅವರೊಂದಿಗೆ ನಡೆಯುತ್ತಿರುವ ತೆರವು ಪ್ರಕ್ರಿಯೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ನಿರ್ಮಿಸಿರುವ ಮಸೀದಿಯ ಅಂತಸ್ತುಗಳನ್ನು ಕೆಡವು ಐದು ತಿಂಗಳ ಕಾಲಾವಕಾಶ ಬೇಕಾಗಿದೆ. ಮಸೀದಿ ಕಟ್ಟಲು ಜನ ಹಣ ನೀಡುತ್ತಾರೆ ಆದರೆ ಅದನ್ನು ಕೆಡವಲು ಯಾರೂ ಮುಂದೆ ಬರುತ್ತಿಲ್ಲ ಎಂದಿದ್ದಾರೆ.

ಏನಿದು ವಿವಾದ?

ಹಿಮಾಚಲ ಪ್ರದೇಶದ ಶಿಮ್ಲಾದ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ದೊಡ್ಡ ಪ್ರತಿಭಟನಾಕಾರರು ಸೆ.11 ಆಂದೋಲನ ನಡೆಸಿದರು. ಪ್ರತಿಭಟನಾಕಾರರಲ್ಲಿ ಸ್ಥಳೀಯರು, ಬಿಜೆಪಿ ಕಾರ್ಯಕರ್ತರು ಮತ್ತು ಬಲಪಂಥೀಯ ಗುಂಪುಗಳ ಸದಸ್ಯರು ಇದ್ದರು. ತ್ರಿವರ್ಣ ಧ್ವಜವನ್ನು ಹಿಡಿದು ಮಸೀದಿ ಬಳಿ ಮೆರವಣಿಗೆ ನಡೆಸಿದವರಲ್ಲಿ ಕೆಲವರು ಅದನ್ನು ಕೆಡವಲು ಒತ್ತಾಯಿಸಿದರು. ‘ಈ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಮಸೀದಿಯ ನಾಲ್ಕೂ ಮಹಡಿಗಳು ಅಕ್ರಮವಾಗಿದೆ. ನಾವೇನಾದರೂ ಅಕ್ರಮವಾಗಿ ನಿರ್ಮಿಸಿದರೆ ತಕ್ಷಣವೇ ಕೆಡವಲಾಗುತ್ತದೆ.10 ವರ್ಷವಾದರೂ ಮಸೀದಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.ಈ ಅಕ್ರಮ ಮಸೀದಿಯನ್ನು ಕೆಡವಬೇಕು ಎಂದು ಪಟ್ಟು ಹಿಡಿದಿದ್ದರು. ಇದರ ನಂತರ ಈ ವಿಚಾರ ಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಮಸೀದಿಯ ಅಕ್ರಮ ನಿರ್ಮಾಣ ತೆರವುಗೊಳಿಸುವಂತೆ ಆದೇಶ ಹೊರಡಿಸಿದೆ.

ಈ ಸುದ್ದಿಯನ್ನೂ ಓದಿ: ಹಿಮಾಚಲದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟ: ಮೃತರ ಸಂಖ್ಯೆ 11 ಕ್ಕೆ ಏರಿಕೆ