ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಮ್ಮರ್‌ಹಿಲ್‌ನ ಶಿವ ದೇವಸ್ಥಾನದ ಬಳಿ ಸಂಭವಿಸಿದ ಭೂಕುಸಿತದ ಅವಶೇಷಗಳಡಿ ಅನೇಕರು ಸಿಲುಕಿದ್ದು, ಮೂರನೇ ದಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ರಾಜ್ಯದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಭೂಕುಸಿತ ಸಂಭವಿಸಿದ್ದು, ದೊಡ್ಡ ಪ್ರಮಾಣ ದಲ್ಲಿ ಹಾನಿಯುಂಟುಮಾಡಿದೆ. ವಿಶೇಷವಾಗಿ ರಾಜಧಾನಿ ಶಿಮ್ಲಾದಲ್ಲಿರುವ ಶಿವ ದೇವಾ ಲಯದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಅನೇಕರು ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದಾರೆ.
ಲಾಲ್ ಕೋಠಿ ಮತ್ತು ಕೃಷ್ಣನಗರದಲ್ಲಿ ಸಹ ಭೂಕುಸಿತವಾಗಿದ್ದು, ಇಂದು ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಶಿಮ್ಲಾದ ಸಮ್ಮರ್‌ಹಿಲ್‌ನ ಶಿವ ದೇವಾಲಯದಲ್ಲಿ ನಾಪತ್ತೆಯಾಗಿರುವವರ ಪತ್ತೆಗಾಗಿ ಮೂರನೇ ದಿನ ಬೆಳಗ್ಗೆಯಿಂದಲೇ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಯಾವುದೇ ಮೃತದೇಹ ಪತ್ತೆಯಾಗಿಲ್ಲ. ನಡೆಯುತ್ತಿರುವ ರಕ್ಷಣಾ ಕಾರ್ಯದಲ್ಲಿ ಸಣ್ಣ ಸೇನಾ ಯಂತ್ರಗಳ ಸಹಾಯವನ್ನು ಪಡೆಯಲಾಗುತ್ತಿದೆ. ಬೆಳಗ್ಗೆ 7.30 ರಿಂದ ಶೋಧ ಕಾರ್ಯ ಆರಂಭಿಸಲಾಗಿದ್ದು, ಇಲ್ಲಿಯವರೆಗೆ 12 ಜನರ ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಮಂಗಳವಾರ ತಡರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಬಳಿಕ ಸ್ಥಗಿತಗೊಳಿಸಲಾಗಿತ್ತು. 4 ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿತ್ತು. ಈ ಪೈಕಿ ಎಚ್ಪಿಯು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಾನಸಿ ಅವರ ಮೃತದೇಹ ಪತ್ತೆಯಾಗಿದೆ. ಮೂರನೇ ಮೃತದೇಹ ಎಚ್ಪಿಯು ಪ್ರೊಫೆಸರ್ ಪಿಎಲ್ ಶರ್ಮಾ ಅವರ ಪತ್ನಿ ಚಿತ್ರಲೇಖಾ ಹಾಗೂ ನಾಲ್ಕನೇ ಶವವನ್ನು ಸುಮನ್ ಕಿಶೋರ್ ಎಂದು ಗುರುತಿಸಲಾಗಿದೆ.
ಶಿಮ್ಲಾದ ಕೃಷ್ಣನಗರದಲ್ಲಿ ಸಹ ಭೂಕುಸಿತ ಸಂಭವಿಸಿದ ಪ್ರಕರಣಗಳು ನಿನ್ನೆ ಮುನ್ನೆಲೆಗೆ ಬಂದಿವೆ. ಕಸಾಯಿಖಾನೆ ಸೇರಿದಂತೆ 5ಕ್ಕೂ ಹೆಚ್ಚು ಮನೆಗಳು ಭೂಕುಸಿತಕ್ಕೆ ಒಳಗಾಗಿದೆ.