Friday, 22nd November 2024

Shiv Sena: ಶಿವಸೇನೆ ಪ್ರಾದೇಶಿಕ ಪಕ್ಷವಾಗಿಯೇ ಉಳಿದಿದ್ದೇಕೆ? ವಾಜಪೇಯಿಯವರಿಂದಲೇ ಬಾಳಾ ಸಾಹೇಬ್‌ ಠಾಕ್ರೆಗೆ ಬಂದಿತ್ತಾ ವಿಶೇಷ ಮನವಿ?

Shiv Sena

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಶಿವಸೇನಾ (Shiv Sena) ಒಂದು ಶಕ್ತಿಶಾಲಿ ಪಕ್ಷವಾಗಿ ಹೊರಹೊಮ್ಮಿದೆ. ಪ್ರಾದೇಶಿಕ ಪಕ್ಷವಾದರೂ ಮಹಾರಾಷ್ಟ್ರದಲ್ಲಿ ತನ್ನದೇ ಆದ ಹಿಡಿತ ಸಾಧಿಸಿದೆ. ಹೀಗಿರುವಾಗ ಶಿವಸೇನಾ ಯಾಕೆ ರಾಷ್ಟ್ರೀಯ ಪಕ್ಷವಾಗಲು ಹೋಗದೆ ಪ್ರಾದೇಶಿಕ ಪಕ್ಷವಾಗಿಯೇ ಉಳಿದಿದೆ ಎಂಬ ಪ್ರಶ್ನೆ ಹಲವರ ಮನದಲ್ಲಿ ಉಳಿದಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.  ಶಿವಸೇನಾ ಯುಬಿಟಿ ನಾಯಕ ಸಂಜಯ್ ರಾವುತ್ ಸಂದರ್ಶನವೊಂದರಲ್ಲಿ ಪಕ್ಷ ಪ್ರಾದೇಶಿಕವಾಗಿ ಮಾತ್ರ ಇರಲು ಕಾರಣವನ್ನು ತಿಳಿಸಿದ್ದಾರೆ.

ಇತ್ತೀಚೆಗೆ ಖಾಸಗಿ ವಾಹಿನಿಯವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ (Bal Thackeray) ಬಗ್ಗೆ ಮಾತನಾಡಿದ್ದಾರೆ. ಪಕ್ಷಕ್ಕಾಗಿ ಅವರು ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಮಾಜಿ ಪ್ರಧಾನಿ ಮತ್ತು ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಕೋರಿಕೆಯ ಮೇರೆಗೆ ಶಿವಸೇನಾ ಪಕ್ಷವನ್ನು ಕೇವಲ ಪ್ರಾದೇಶಿಕವಾಗಿ ಇರಿಸಿದ್ದರು ಎಂದು ಅವರು ಹೇಳಿದ್ದಾರೆ. ಶಿವನೇನಾ ಹಾಗೂ ಬಿಜೆಪಿಯ ನಡುವೆ ಒಳ್ಳೆಯ ಬಂಧವಿತ್ತು. ಆ ಸಮಯದಲ್ಲಿ ಶಿವಸೇನಾ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲು ತಯಾರಿ ನಡೆಸಿತ್ತು ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ಚಳುವಳಿಯ ನಂತರ ಹಿಂದಿ ಭಾಷಿಗ ರಾಜ್ಯಗಳಲ್ಲಿ ಬಾಳಾ ಸಾಹೇಬರ ಅಲೆ ಇತ್ತು. 1992 ರಲ್ಲಿ ಚುನಾವಣೆಗೆ ನಾವು ಎಲ್ಲ ಕಡೆ ಭಾಗವಹಿಸಲಿದ್ದೇವೆ ಎಂದು ಠಾಕ್ರೆ ಸಾಹೇಬರು ಹೇಳಿದ್ದರು. ಅವರು ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಾರೆ ಎಂದು ಘೋಷಿಸಿದಾಗ, ಅಟಲ್‌ಜೀ ಅವರಿಂದ ಕರೆ ಬಂದಿತು. ಬಾಳಾ ಸಾಹೇಬ್, ನೀವು ಚುನಾವಣೆಗೆ ಸ್ಪರ್ಧಿಸಿದರೆ, ನಮ್ಮ ಮತಗಳು ಮತ್ತೊಮ್ಮೆ ವಿಭಜನೆಯಾಗುತ್ತದೆ ನಾವು ನಷ್ಟವನ್ನು ಅನುಭವಿಸುತ್ತೇವೆ ಎಂದು ಅವರು ವಿನಂತಿಸಿಕೊಂಡಿದ್ದರು ಎಂದರು. ಅಟಲ್‌ ಜೀ ವಿನಂತಿಯನ್ನು ಸ್ವೀಕರಿಸಿದ ಠಾಕ್ರೆ ಸಾಹೇಬರು ಎಂದಿಗೂ ಬೇರೆ ರಾಜ್ಯಗಳಲ್ಲಿ ಸ್ಪರ್ಧಿಸುವ ಯೋಚನೆ ಮಾಡಲೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Maharashtra Elections 2024: ವಿಪಕ್ಷಗಳ ದೂರವಾಣಿ ಕದ್ದಾಲಿಸಿದ ಆರೋಪ; ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಆದೇಶ

ಮೈತ್ರಿಕೂಟಗಳಿಂದ ಉಚಿತ ಕೊಡುಗೆಗಳ ಮಹಾಪೂರ

ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ  ರಾಜಕೀಯ ಪಕ್ಷಗಳು ಉಚಿತ ಯೋಜನೆಗಳನ್ನು ರೂಪಿಸುವ ಭರವಸೆ ನೀಡಿದೆ. ಒಂದು ಕಡೆ ಬಿಜೆಪಿ ನೇತೃತ್ವದ ‘ಮಹಾಯುತಿ’, ಮತ್ತೊಂದು ಕಡೆ ಕಾಂಗ್ರೆಸ್‌ ನೇತೃತ್ವದ ‘ಮಹಾ ವಿಕಾಸ್‌ ಅಘಾಡಿ’ ಭರಪೂರ ಯೋಜನೆ ಪ್ರಕಟಿಸಿವೆ. ಬಿಜೆಪಿ, ಮಹಿಳೆಯರಿಗೆ ಮಾಸಿಕ 2,100 ರೂ. ನೆರವು, ರೈತರ ಸಾಲ ಮನ್ನಾ, ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂ. ಆರ್ಥಿಕ ಸಹಾಯ ಸೇರಿದಂತೆ 25 ಭರವಸೆ ನೀಡಿದೆ. ಕಾಂಗ್ರೆಸ್‌ ಹಾಗೂ ಮೈತ್ರಿ ಪಕ್ಷಗಳು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ನಾರಿಯರಿಗೆ ಮಾಸಿಕ ಮೂರು ಸಾವಿರ ರೂ. ಆರ್ಥಿಕ ನೆರವು, ನಿರುದ್ಯೋಗಿ ಯುವಕರಿಗೆ ಮಾಸಿಕ 4 ಸಾವಿರ ರೂ. ಭತ್ಯೆ ಸೇರಿದಂತೆ ಹಲವು ಯೋಜನೆ ಪ್ರಕಟಿಸಿದೆ.