ಕೋಲ್ಕತಾ: ಬಿಹಾರ ನಂತರ ಪಶ್ಚಿಮ ಬಂಗಾಳದತ್ತ ಶಿವಸೇನಾ ಮುಖ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಸಜ್ಜಾಗುತ್ತಿದೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸ ಲಾಗಿದೆ. ಶೀಘ್ರದಲ್ಲೇ ಕೋಲ್ಕತಾಕ್ಕೆ ತೆರಳಿ ಈ ಬಗ್ಗೆ ಮುಂದಿನ ಯೋಜನೆ ರೂಪಿಸಲಿದ್ದೇವೆ ಎಂದು ಸಂಜಯ್ ರಾವತ್ ಹೇಳಿದರು.
2021ರಲ್ಲಿ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ಜೊತೆಗೆ ಏಪ್ರಿಲ್-ಮೇ ತಿಂಗಳಲ್ಲಿ294 ಸದಸ್ಯ ಬಲದ ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಮಮತಾ ಬ್ಯಾನರ್ಜಿ ನೇತೃತ್ವ ತೃಣಮೂಲ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಜನತೆ ಬೇಸತ್ತಿದ್ದು, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ.
ಶಿವ ಸೇನಾ ಏಕಾಂಗಿ ಸ್ಪರ್ಧಿಸಲಿದೆಯೇ? ಅಥವಾ ಎನ್ಡಿಎ ಮೈತ್ರಿಕೂಟದ ಜೊತೆ ಕೈ ಜೋಡಿಸಲಿದೆಯೇ ಇನ್ನೂ ತಿಳಿದು ಬಂದಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆ ಮೈತ್ರಿ ಸಾಧಿಸಿ ಮಹಾ ವಿಕಾಸ್ ಅಘಾಡಿ ಮೂಲಕ ಶಿವಸೇನಾದ ಉದ್ಧವ್ ಠಾಕ್ರೆ ಅವರು ಸರ್ಕಾರ ನಡೆಸುತ್ತಿದ್ದಾರೆ.