Thursday, 12th December 2024

ಶೂ ವ್ಯಾಪಾರಿಗಳ ನಿವಾಸಗಳ ಮೇಲೆ IT ದಾಳಿ: 40 ಕೋಟಿ ರೂಪಾಯಿ ವಶ

ಆಗ್ರಾ: ಆದಾಯ ತೆರಿಗೆ ಇಲಾಖೆಯು ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರಮುಖ ಶೂ ವ್ಯಾಪಾರಿಗಳ ನಿವಾಸಗಳ ಮನೆ ಮೇಲೆ ದಾಳಿ ನಡೆಸಿದೆ.
ಅಧಿಕಾರಿಗಳು ಇದುವರೆಗೆ 40 ಕೋಟಿ ರೂಪಾಯಿ ನಗದು, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ನಗರದಲ್ಲಿ ಕನಿಷ್ಠ ಮೂವರು ಶೂ ವ್ಯಾಪಾರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ.

500 ರೂಪಾಯಿ ನೋಟುಗಳ ಹಲವಾರು ಬಂಡಲ್‌ಗಳನ್ನು ಪಾದರಕ್ಷೆ ಕಂಪನಿಯ ಮಾಲೀಕರ ನಿವಾಸದಲ್ಲಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನೋಟುಗಳನ್ನು ಎಣಿಸಲು ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರನ್ನು ಕರೆಸಲಾಯಿತು.

ಇದೇ ತಿಂಗಳ ಮೇ 6 ರಂದು ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆ ಕೆಲಸಗಾರ ಜಹಾಂಗೀರ್ ಆಲಂ ಮನೆಯಲ್ಲಿ ಸಿಕ್ಕ 35 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು.

ಸದ್ಯ 40 ಕೋಟಿ ರೂ. ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿ ಮಾಡಿದ ಹಣವನ್ನು ಇನ್ನೂ ಏಣಿಕೆ ಮಾಡಲಾಗುತ್ತಿದ್ದು, ಹಣದ ಮೊತ್ತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿರುವ ಶಂಕೆಯ ಮೇಲೆ ಇಲಾಖೆ ದಾಳಿ ನಡೆಸಿದೆ.

ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆ ಗುಜರಾತ್‌ನ ಅಹಮದಾಬಾದ್ ಮತ್ತು ವಡೋದರಾದಲ್ಲಿ ದಾಳಿ ನಡೆಸಿತ್ತು. ರಿಯಲ್ ಎಸ್ಟೇಟ್ ಗ್ರೂಪ್ ಮಾಧವ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ರಿಯಲ್ ಎಸ್ಟೇಟ್ ಮತ್ತು ಸರ್ಕಾರಿ ಮೂಲಸೌಕರ್ಯ ಯೋಜನೆಗಳಿಗೆ ಹೆಸರುವಾಸಿಯಾದ ಗುಂಪು, ಎರಡು ನಗರಗಳಾದ್ಯಂತ 27 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತು.