Monday, 16th December 2024

Singer TM Krishna: ಗಾಯಕ ಟಿ.ಎಂ.ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿ ಪ್ರಶಸ್ತಿ; ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ತಡೆಯಾಜ್ಞೆ

ನವದೆಹಲಿ: ಖ್ಯಾತ ಕರ್ನಾಟಕ ಸಂಗೀತ (Karnataka Sangeetha) ಗಾಯಕ ಟಿ.ಎಂ.ಕೃಷ್ಣ(TM Krishna) ಅವರಿಗೆ ಭಾನುವಾರ (ಡಿ. 15) ನೀಡಲಾಗಿದ್ದ ಪ್ರತಿಷ್ಠಿತ ಸಂಗೀತ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ(MS Subbulakshmi) ಪ್ರಶಸ್ತಿಗೆ ಸುಪ್ರೀಂ ಕೋರ್ಟ್(Supreme Court) ಮಧ್ಯಂತರ ತಡೆಯಾಜ್ಞೆ(Interim Stay) ನೀಡಿದೆ (Singer TM Krishna).

ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳಲ್ಲಿ ಗಾಯಕ ಟಿ.ಎನ್. ಕೃಷ್ಣ ಅವರು ಕಲಾನಿಧಿ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಬಗ್ಗೆ ಇಲ್ಲಸಲ್ಲದ್ದು ಬರೆದಿದ್ದು, ಅವರ ವ್ಯಕ್ತಿತ್ವಕ್ಕೆ ಅಪಚಾರವೆಸಗಿದ್ದಾರೆ ಎಂದು ಆರೋಪಿಸಿ ಪ್ರಸಿದ್ಧ ಗಾಯಕಿ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ ಶ್ರೀನಿವಾಸನ್ ಮದ್ರಾಸ್‌ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ಪರಿಶೀಲಿಸಿದ್ದು, ಈ ಕುರಿತು ಸಂಪೂರ್ಣವಾಗಿ ವಿಚಾರಣೆ ನಡೆದು ಅರ್ಜಿ ವಜಾಗೊಳಿಸುವವರೆಗೂ ಪ್ರಶಸ್ತಿಯ ಹೆಸರಿನೊಂದಿಗೆ ಗಾಯಕ ಟಿ.ಎಂ. ಕೃಷ್ಣ ಗುರುತಿಸಿಕೊಳ್ಳಬಾರದು ಎಂದು ನಿರ್ದೇಶಿಸಿದೆ. ಅಷ್ಟೇ ಅಲ್ಲದೆ, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ಎಸ್ ವಿಎನ್ ಭಟ್ಟಿ ಅವರ ಪೀಠವು ಪ್ರತಿಸ್ಪರ್ಧಿ ವಕೀಲರಿಗೆ ನೋಟಿಸ್ ಜಾರಿ ಮಾಡಿದೆ.

ನಿನ್ನೆ (ಡಿ.15) ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ 98ನೇ ವರ್ಷದ ವಾರ್ಷಿಕೋತ್ಸವ, ಸಮ್ಮೇಳನ ಮತ್ತು ಸಂಗೀತ ಕಚೇರಿಗಳ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸಂಗೀತ ಗಾಯಕ ಟಿ.ಎಂ.ಕೃಷ್ಣ ಅವರಿಗೆ ಕಲಾನಿಧಿ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಒಡಿಶಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್.ಮುರಳೀಧರ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಟಿ.ಎಂ.ಕೃಷ್ಣ, “ನನ್ನಂತಹ ಗಾಯಕ ಅವರ ನೆನಪಿಗಾಗಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಸ್ವೀಕರಿಸುವುದು ಗೌರವದ ವಿಷಯವಷ್ಟೇ ಅಲ್ಲ. ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಆಶೀರ್ವಾದ ಪಡೆದ ಹಾಗೆ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ” ಎಂದು ಹೇಳಿದ್ದರು.

ಅಪ್ರತಿಮ ಗಾಯಕಿ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಹೆಸರಿನ ಪ್ರಶಸ್ತಿ ಟಿ.ಎಂ. ಕೃಷ್ಣ ಅವರಿಗೆ ಘೋಷಣೆ ಆದ್ದಾಗಿನಿಂದ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ. ಶ್ರೀನಿವಾಸನ್‌ ಪ್ರಶಸ್ತಿ‌ ನೀಡಬಾರದೆಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಂ.ಎಸ್‌. ಸುಬ್ಬುಲಕ್ಷ್ಮಿ ತಮ್ಮ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ಮತ್ತು ಸಂಸ್ಥೆಗಳನ್ನು ಸ್ಥಾಪಿಸಬಾರದು ಎಂದು ಮರಣದ ಉಯಿಲಿನಲ್ಲಿ ಉಲ್ಲೇಖಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಅಷ್ಟೇ ಅಲ್ಲದೆ ಎಂ.ಎಸ್​. ಸುಬ್ಬುಲಕ್ಷ್ಮಿ ವಿರುದ್ಧ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಲೇ ಬಂದಿರುವ ಟಿ.ಎಂ. ಕೃಷ್ಣ ಅವರಿಗೆ ಸುಬ್ಬುಲಕ್ಷ್ಮಿ ಅವರ ಹೆಸರಿನ ಈ ಪ್ರಶಸ್ತಿ ನೀಡುವುದು ಸರಿಯಲ್ಲ ಎಂದು ವಿ. ಶ್ರೀನಿವಾಸನ್ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಸಂಗೀತ ಕಲಾನಿಧಿ ಎಂ.ಎಸ್​. ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದನ್ನು ಮದ್ರಾಸ್ ಹೈಕೋರ್ಟ್ ತಡೆಹಿಡಿದಿತ್ತು. ಸಂಗೀತ ಅಕಾಡೆಮಿ ಪ್ರಶಸ್ತಿಗಳನ್ನು ನೀಡಲು ಮತ್ತು ಟಿ.ಎಂ.ಕೃಷ್ಣ ಅವರಿಗೆ ಪ್ರಶಸ್ತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಆದರೆ ಆ ಪ್ರಶಸ್ತಿಗೆ ಸುಬ್ಬುಲಕ್ಷ್ಮಿ ಹೆಸರಿಡಬಾರದು ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದರು. ನಿನ್ನೆ ಪ್ರಶಸ್ತಿಯನ್ನು ಸ್ವೀಕರಿಸಿರುವ ಟಿ.ಎಂ. ಕೃಷ್ಣ ಅವರಿಗೆ ಇದೀಗ ಸುಪ್ರೀಂ ಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಸುದ್ದಿಯನ್ನೂ ಓದಿ: Supreme Court: ಮಸೀದಿಯೊಳಗೆ ʼಜೈ ಶ್ರೀರಾಮ್‌ʼ ಘೋಷಣೆ ಕೂಗುವುದು ಅಪರಾಧವೇ? ಸುಪ್ರೀಂ ಕೋರ್ಟ್‌ ಪ್ರಶ್ನೆ