Monday, 16th December 2024

Siriya Conflict: ಸಿರಿಯಾದಲ್ಲಿ ಸಿಲುಕಿದ್ದ 75 ಭಾರತೀಯರ ಸ್ಥಳಾಂತರ

External Affairs Ministry

ಡಮಾಸ್ಕಸ್: ಕೆಲ ದಿನಗಳಿಂದ ಆಂತರಿಕ ಸಂಘರ್ಷದಿಂದ ನಲುಗುತ್ತಿದ್ದ ಸಿರಿಯಾ, (Siriya Conflict) ಈಗ ಸಂಪೂರ್ಣವಾಗಿ ಬಂಡುಕೋರ ಪಡೆಗಳ ವಶವಾಗಿದೆ.  ಬಂಡುಕೋರರ ಆಡಳಿತ ಶುರುವಾಗುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ದೇಶದಿಂದ ಪಲಾಯನ ಮಾಡಿದ್ದಾರೆ. ಸಿರಿಯಾದಲ್ಲಿ ಸಿಲುಕಿದ್ದ ಜಮ್ಮು-ಕಾಶ್ಮೀರದ ಯಾತ್ರಿಕರು ಸೇರಿದಂತೆ ಹಲವು ರಾಜ್ಯಗಳ 75 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್‌ಗೆ ತೆರಳಿದ್ದಾರೆ ಮತ್ತು ವಾಣಿಜ್ಯ ವಿಮಾನಗಳ ಮೂಲಕ ಭಾರತಕ್ಕೆ ಮರಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (External Affairs Ministry) ಮಂಗಳವಾರ ತಡರಾತ್ರಿ ತಿಳಿಸಿದೆ. ಸ್ಥಳಾಂತರಗೊಂಡವರಲ್ಲಿ ಜಮ್ಮು ಮತ್ತು ಕಾಶ್ಮೀರದ 44 ಯಾತ್ರಾರ್ಥಿಗಳು ಸೇರಿದ್ದಾರೆ. ಅವರು ಸೈದಾ ಜೈನಾಬ್‌ನಲ್ಲಿ ಸಿಲುಕಿಕೊಂಡಿದ್ದರು ಎಂದು ಸಚಿವಾಲಯ ತಿಳಿಸಿದೆ.

ಸಿರಿಯಾದಲ್ಲಿರುವ ಭಾರತೀಯ ಪ್ರಜೆಗಳ ವಿನಂತಿಯ ಮೇರೆಗೆ ಸ್ಥಳಾಂತರ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಡಮಾಸ್ಕಸ್ ಮತ್ತು ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗ ಸ್ಥಳಾಂತರಿಸುವಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಸ್ಥಳಾಂತರದ ನಂತರವೂ ಕೆಲ ಭಾರತೀಯರು ಸಿರಿಯಾದಲ್ಲಿಯೇ ಸಿಲುಕಿ ಹಾಕಿಕೊಂಡಿದ್ದು, ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ ಸಹಾಯವಾಣಿ ಸಂಖ್ಯೆ +963 993385973, ವಾಟ್ಸಾಪ್ ನಲ್ಲಿ ಮತ್ತು ಇಮೇಲ್ ಐಡಿ hoc.damascus@mea.gov.in ಮೂಲಕ ಸಂಪರ್ಕದಲ್ಲಿರಲು ಭಾರತೀಯ ಸರ್ಕಾರ ಅವರಿಗೆ ಸಲಹೆ ನೀಡಿದೆ.

ಸದ್ಯ ಸಿರಿಯಾದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಹಯಾತ್ ತಹ್ರೀರ್ ಅಲ್-ಶಾಮ್ ಗುಂಪಿನ ನೇತೃತ್ವದ ಬಂಡಾಯ ಪಡೆಗಳು 12 ದಿನಗಳ ಆಕ್ರಮಣದ ನಂತರ ರಾಜಧಾನಿ ಡಮಾಸ್ಕಸ್ ಅನ್ನು ಭಾನುವಾರ ವಶಪಡಿಸಿಕೊಂಡಿವೆ. ಬಂಡುಕೋರರು ಡಮಾಸ್ಕಸ್‌ಗೆ ವಶ ಮಾಡಿಕೊಂಡ ನಂತರ ಅಧ್ಯಕ್ಷ ಅಸ್ಸಾದ್ ರಷ್ಯಾಗೆ ಪಲಾಯನ ಮಾಡಿದ್ದಾರೆ. ಇತ್ತ ಬಂಡುಕೋರರು ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಸಿ ಹಾನಿ ನಡೆಸಿದ್ದಾರೆ.

ಟರ್ಕಿ ಬೆಂಬಲಿತ ಪಡೆಗಳ ಪ್ರಾಬಲ್ಯಕ್ಕೆ ಬೆದರಿರುವ ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಅಲ್ ಜಲಾಲಿ ಅವರು ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಸೇನೆ ಹಾಗೂ ಭದ್ರತಾ ಪಡೆಗಳು ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ನಡೆದಿವೆ. ಇದರಿಂದ ಸಿರಿಯಾ ವಿಮಾನ ನಿಲ್ದಾಣದ ಸ್ಥಿತಿ ಅತಂತ್ರವಾಗಿದ್ದು, ಅಂತಾರಾಷ್ಟ್ರೀಯ ಸಂಚಾರ ಅಪಾಯಕ್ಕೆ ಸಿಲುಕಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ : Syria Crisis: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ವಶಕ್ಕೆ; ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಪಲಾಯನ