Friday, 20th September 2024

Sitaram Yechury: ಸೀತಾರಾಮ್ ಯೆಚೂರಿ ಆಸ್ಪತ್ರೆಗೆ ದಾಖಲು; ಸ್ಥಿತಿ ಗಂಭೀರ

Sitaram yechury

ನವದೆಹಲಿ: ಸಿಪಿಐ(ಎಂ)(CPI(M)) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ(Sitaram Yechury) ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಪ್ರಸ್ತುತ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರನ್ನು ವೆಂಟಿಲೇಟರ್‌ನಲ್ಲಿಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಕುರಿತು ಸಿಪಿಐ(ಎಂ) ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, 72 ವರ್ಷದ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ. ವೈದ್ಯರು ಕೂಡ ಒಂದು ಪ್ರಕಟಣೆ ಹೊರಡಿದ್ದು, ಸೀತಾರಾಮ್‌ ಯೆಚೂರಿಯವರ ಸ್ಥಿತಿ ಬಹಳ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾಘಟಕದಲ್ಲಿಟ್ಟು ಅವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದಿದ್ದಾರೆ.

ಸೀತಾರಾಮ್ ಯೆಚೂರಿ ಅವರನ್ನು ಆಗಸ್ಟ್ 19 ರಂದು ನ್ಯುಮೋನಿಯಾಗೆ ತುತ್ತಾಗಿ ಉಸಿರಾಟ ಸಮಸ್ಯೆಗೆ ತುತ್ತಾಗಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಆಗಸ್ಟ್ 31 ರಂದು ಸಿಪಿಐ(ಎಂ) ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಜ್ಞ ವೈದ್ಯರ ತಂಡವು ಸೀತಾರಾಮ್ ಯೆಚೂರಿ ಅವರಿಗೆ ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿತ್ತು.

ಯೆಚೂರಿ ಅವರು ಆಗಸ್ಟ್ 22 ರಂದು X (ಹಿಂದೆ ಟ್ವಿಟರ್) ನಲ್ಲಿ 6 ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಿದರು, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ನಿಧನದ ನಂತರ ಸಂದೇಶವನ್ನು ಕಳುಹಿಸಿದ್ದರು. ಆಗಸ್ಟ್ 23 ರಂದು ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಪಿಐ(ಎಂ), ಕಾಂಗ್ರೆಸ್ ಮತ್ತು ಎನ್‌ಸಿ ನಡುವಿನ ಒಗ್ಗಟ್ಟಿನ ಸಂದೇಶವನ್ನು ಪೋಸ್ಟ್ ಮಾಡಿದರು.

ಅವರು ಆಗಸ್ಟ್ 29 ರಂದು ತಮ್ಮ ಆತ್ಮೀಯ ಸ್ನೇಹಿತರಾಗಿದ್ದ ಅಬ್ದುಲ್ ಗಫೂರ್ ನೂರಾನಿ ಅವರ ನಿಧನಕ್ಕೆ ಸಂತಾಪ ಸೂಚಿಸುವ ಮೂಲಕ ಸಕ್ರಿಯರಾಗಿದ್ದರು. ಸಿಪಿಐ(ಎಂ) ಪಾಲಿಟ್‌ಬ್ಯುರೊ ಸದಸ್ಯರೂ ಆಗಿರುವ ಯೆಚೂರಿ ಅವರು ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಅವರು 1996 ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರಕ್ಕಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಪಿ ಚಿದಂಬರಂ ಅವರೊಂದಿಗೆ ಸಹಕರಿಸಿದರು ಮತ್ತು 2004 ರಲ್ಲಿ ಯುಪಿಐ ಸರ್ಕಾರ ಅಧಿಕಾರಕ್ಕೆ ಬರಲು ನಡೆಸಿದ ಹಲವು ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1975 ರಲ್ಲಿ, ಜೆಎನ್‌ಯುನಲ್ಲಿ ವಿದ್ಯಾರ್ಥಿಯಾಗಿದ್ದಾಗ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಯಿತು. ಅವರು 1977-78 ರ ಅವಧಿಯಲ್ಲಿ ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಸುದ್ದಿಯನ್ನೂ ಓದಿ: ತೆಲಂಗಾಣ ಚುನಾವಣೆ: ಸಿಪಿಐ(ಎಂ)ನ 14 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ