Sunday, 27th October 2024

Sivakasi : ಶಿವಕಾಶಿ, ಭಾರತದ ಪಟಾಕಿ ರಾಜಧಾನಿ ಈ ಬಿಸಿನೆಸ್‌ ಎಷ್ಟು ಸಾವಿರ ಕೋಟಿ ಗೊತ್ತೇ?

Sivakasi

ಬೆಳಕಿನ ಹಬ್ಬ ದೀಪಾವಳಿ ಬಂದಾಗ, ಚಿಕ್ಕ ಮಕ್ಕಳು, ಹುಡುಗ -ಹುಡುಗಿಯರು, ಯುವಕರಿಂದ ಹಿರಿಯರ ತನಕ ಎಲ್ಲರಿಗೂ ಪಟಾಕಿ ಸಿಡಿಸುವ ಸಂಭ್ರಮ ಮತ್ತು ಉತ್ಸಾಹ ಉಂಟಾಗುತ್ತದೆ. ಮನೆ ಮಂದಿಯೆಲ್ಲ ಸೇರಿ, ಇಷ್ಟಾನುಸಾರ ಸಿಡಿಸುವ ಪಟಾಕಿಗಳು ಒಂದೆರಡಲ್ಲ. ಸುರ್‌ ಸುರ್‌ ಬತ್ತಿ, ನಕ್ಷತ್ರ ಕಡ್ಡಿ, ಮಾಲೆ ಪಟಾಕಿ, ನೆಲ ಚಕ್ರ, ಫ್ಲವರ್‌ ಪಾಟ್‌, ರಾಕೆಟ್, ಫೌಂಟೇನ್ಸ್‌, ಮಕ್ಕಳ ಆಟಿಕೆಯ ಗನ್‌ಗಳು, ಹಸಿರು ಪಟಾಕಿ ಹೀಗೆ ಅನೇಕ ವಿಧಗಳಲ್ಲಿ ಪಟಾಕಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವೆಲ್ಲ ಎಲ್ಲಿ ತಯಾರಾಗಿ ಬರುತ್ತಿವೆ ಎಂದು ಎಂದಾದರೂ ಆಲೋಚಿಸಿದ್ದೀರಾ? ಆ ಪಟ್ಟಣದ (Sivakasi) ಬಗ್ಗೆ ಇಲ್ಲಿದೆ ವಿವರ.

ಶಿವಕಾಶಿಯ ವ್ಯವಹಾರ 6,000 ಕೋಟಿ ರೂ

ನಿಮಗೆ ಆಶ್ಚರ್ಯವಾಗಬಹುದು. ಇಡೀ ದೇಶದ 70% ಪಟಾಕಿಗಳು ತಮಿಳುನಾಡಿನ ಶಿವಕಾಶಿಯಲ್ಲಿ ತಯಾರಾಗುತ್ತವೆ. ಭಾರತದ ಪಟಾಕಿಗಳ ರಾಜಧಾನಿ ಎಂಬ ಹೆಗ್ಗಳಿಕೆಗೆ ಶಿವಕಾಶಿ ಪಾತ್ರವಾಗಿದೆ. ಇಲ್ಲಿ ಪ್ರತಿ ವರ್ಷ 6,000 ಕೋಟಿ ರೂ.ಗೂ ಹೆಚ್ಚು ಪಟಾಕಿಗಳ ವಹಿವಾಟು ನಡೆಯುತ್ತದೆ. ಮಾತ್ರವಲ್ಲದೆ ಇಲ್ಲಿ ಅಪಾಯಕರ ಸನ್ನಿವೇಶದಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರ ಸಂಕಷ್ಟಗಳೂ, ಮನ ಮಿಡಿಯುವಂತೆ ಮಾಡುತ್ತದೆ. ಬನ್ನಿ, ದೀಪಾವಳಿಯ ಸಂದರ್ಭ ಪಟಾಕಿಗಳ ರಾಜಧಾನಿ ಶಿವಕಾಶಿಯ ಬಗ್ಗೆ ಕುತೂಹಲಕರ ವಿವರಗಳನ್ನು ತಿಳಿದುಕೊಳ್ಳೋಣ.

ಪಟಾಕಿ ದುರಂತಗಳೂ ಹೆಚ್ಚು

ಬೆಂಗಳೂರಿನಿಂದ ಸುಮಾರು 500 ಕಿಲೋಮೀಟರ್‌ ದೂರದಲ್ಲಿರುವ ಶಿವಕಾಶಿಯಲ್ಲಿ ಪಟಾಕಿ ಉದ್ದಿಮೆಯನ್ನೇ ನಂಬಿಕೊಂಡಿರುವ 25,000 ಮಂದಿ ಜನರಿದ್ದಾರೆ. ಪ್ರಿಂಟಿಂಗ್‌ ಉದ್ಯಮವೂ ಇಲ್ಲಿ ದೊಡ್ಡ ಮಟ್ಟದಲ್ಲಿದೆ. ದೇಶ ಉತ್ಪಾದಿಸುವ ಡೈರಿಗಳಲ್ಲಿ 30% ರಷ್ಟು ಇಲ್ಲಿಯೇ ತಯಾರಾಗುತ್ತದೆ. ಜತೆಗೆ ಬೆಂಕಿ ಪೊಟ್ಟಣಗಳನ್ನು ತಯಾರಿಸುವ ಹಲವಾರು ಘಟಕಗಳೂ ಇಲ್ಲಿವೆ.

ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿರುವ ಶಿವಕಾಶಿಯಲ್ಲಿ ಪಟಾಕಿ ಉದ್ದಿಮೆ ಸಾವಿರಾರು ಕೋಟಿ ರೂ.ಗಳ ವ್ಯವಹಾರವಾಗಿದ್ದರೂ ಕಾರ್ಮಿಕರಿಗೆ ಹೇಳಿಕೊಳ್ಳುವ ಸೌಲಭ್ಯಗಳು ಇಲ್ಲ. ಇತಿಹಾಸವನ್ನು ಗಮನಿಸಿದರೆ ಶಿವ ಕಾಶಿಯಲ್ಲಿ ಹಲವಾರು ಸಲ ಪಟಾಕಿ ತಯಾರಿಸುವ ಘಟಕಗಳಲ್ಲಿ ಸಿಡಿಮದ್ದುಗಳು ಸ್ಫೋಟಗೊಂಡು ದುರಂತಗಳು ಸಂಭವಿಸಿವೆ. ಹಲವಾರು ಮಂದಿ ಮೃತಪಟ್ಟಿದ್ದಾರೆ. ಅನೇಕ ಮಂದಿ ಕಾಯಿಲೆಗೆ ಒಳಗಾಗಿದ್ದಾರೆ. 2024ರಲ್ಲೂ ಮೇ ಜುಲೈ ಮತ್ತು ಆಗಸ್ಟ್‌ನಲ್ಲಿ ಪಟಾಕಿ ದುರಂತಗಳು ಸಂಭವಿಸಿವೆ. ಮೇನಲ್ಲಿ ಸಂಭವಿಸಿದ ಪಟಾಕಿಗಳ ಸ್ಫೋಟದಲ್ಲಿ 6 ಮಹಿಳೆಯರು ಸೇರಿದಂತೆ 10 ಮಂದಿ ಮೃತಪಟ್ಟಿದ್ದರು. ಪಟಾಕಿ ತಯಾರಿಸುವ ಸ್ಥಳ, ಗೋದಾಮುಗಳು, ಸಾಗಣೆ ಮಾಡುವಾಗ ಸ್ಫೋಟಗಳು ಸಂಭವಿಸುತ್ತವೆ. ಅಗ್ನಿ ದುರಂತಗಳೂ ಆಗುತ್ತವೆ. 2012ರ ಸೆಪ್ಟೆಂಬರ್‌ನಲ್ಲಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 40 ಮಂದಿ ಬಲಿಯಾಗಿದ್ದರು. ಪಟಾಕಿ ತಯಾರಿಸುವ ಉದ್ದಿಮೆ ಎಷ್ಟು ಅಪಾಯಕಾರಿ ಮತ್ತು ಅಸುರಕ್ಷಿತ ಎನ್ನುವುದನ್ನು ಈ ಅಂಕಿ ಅಂಶಗಳು ಬಿಂಬಿಸುತ್ತವೆ.

ಶಿವಕಾಶಿಯಲ್ಲೇ ಹೆಚ್ಚು ಪಟಾಕಿ ತಯಾರಾಗೋದು ಏಕೆ?

ಶಿವಕಾಶಿ ಎಂಬ ಪುಟ್ಟ ಗ್ರಾಮವನ್ನು ಪಟಾಕಿ ಉತ್ಪಾದನೆಯ ತಾಣವನ್ನಾಗಿಸುವಲ್ಲಿ ಅಯ್ಯಾ ನಾಡರ್‌ ಎಂಬ ಉದ್ಯಮಿಯ ಪಾತ್ರ ಪ್ರಮುಖ. 1922 ರಲ್ಲಿ ಗ್ರಾಮದಲ್ಲಿ ಬೆಂಕಿ ಪೊಟ್ಟಣ ತಯಾರಿಸುವ ಕಾರ್ಖಾನೆಯನ್ನು ಆರಂಭಿಸಿದರು. ಬಳಿಕ ಪ್ರಿಂಟಿಂಗ್‌ ಬಿಸಿನೆಸ್‌ಗೂ ಅವರ ವಹಿವಾಟು ಬೆಳೆಯಿತು. 1925ರಲ್ಲಿ ನ್ಯಾಶನಲ್‌ ಫೈರ್‌ ವರ್ಕ್ಸ್‌ ಸ್ಥಾಪಿಸಿದರು. ಉಷ್ಣ ಹವೆಯಿಂದಾಗಿ ಕೃಷಿಗೆ ಇಲ್ಲಿ ಮಹತ್ವ ಕಡಿಮೆ. ಪಟಾಕಿ ತಯಾರಿಕೆಗೆ ಕಾರ್ಮಿಕರು ಲಭಿಸಿದರು. ಬಾಲ ಕಾರ್ಮಿಕರ ಬಳಕೆಯ ಕಳಂಕವೂ ತಟ್ಟಿತ್ತು.

ಪಟಾಕಿಗಳನ್ನು ತಯಾರಿಸಲು ಚೆನ್ನಾಗಿ ಬಿಸಿಲು ಇರಬೇಕು. ಶಿವಕಾಶಿಯ ಒಣ ಹವೆಯಿಂದಾಗಿ ಪಟಾಕಿ ತಯಾರಿಕೆಗೆ ಪೂರಕವಾಗಿದೆ. ಇಲ್ಲಿ ಸದಾ ಉಷ್ಣಾಂಶ ಹೆಚ್ಚಿರುತ್ತದೆ. ಮಧುರೈ ಮತ್ತು ಶಿವಕಾಶಿ ಇರುವ ವಿರುಧನಗರ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪಟಾಕಿ ತಯಾರಿಸುವ ಘಟಕಗಳು ಇವೆ. ಮನೆ ಮುಂದೆ ಸಿಡಿಮದ್ದನ್ನು ಒಣಗಿಸಲು ಹರವಿ ಇಟ್ಟಿರುವ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಸಣ್ಣ ಪುಟ್ಟ ರೂಮ್‌ಗಳಲ್ಲಿ ಕೆಲಸಗಾರರು ಕೈಗೆ ಗ್ಲವ್ಸ್‌ಗಳನ್ನೂ ಹಾಕದೆ ರಾಸಾಯನಿಕಗಳನ್ನು ಮಿಶ್ರಣ ಮಾಡುತ್ತ ಪಟಾಕಿ ತಯಾರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸುರಕ್ಷತೆಯ ಬಗ್ಗೆ ಜನ ಜಾಗೃತಿ ಮೂಡಿಸಲಾಗಿದೆ. ಸ್ಥಳೀಯಾಡಳಿತವು ನಿಯಮ ಉಲ್ಲಂಘಿಸುವ ಘಟಕಗಳ ಲೈಸೆನ್ಸ್‌ ರದ್ದುಪಡಿಸುತ್ತಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಡಿಯಲ್ಲಿ ಫೈರ್‌ ವರ್ಕ್ಸ್‌ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ ಸೆಂಟರ್‌ ಅನ್ನೂ ಇಲ್ಲಿ ಸ್ಥಾಪಿಸಲಾಗಿದೆ.
ದೀಪಾವಳಿಗೆ ಮುನ್ನ ನಾನಾ ರಾಜ್ಯಗಳಿಂದ ವ್ಯಾಪಾರಿಗಳು ಮತ್ತು ಜನರು ನೇರವಾಗಿ ಶಿವಕಾಶಿಗೆ ಭೇಟಿ ನೀಡಿ ಅಗ್ಗದ ದರದಲ್ಲಿ ಪಟಾಕಿಗಳನ್ನು ಖರೀದಿಸುತ್ತಾರೆ. ಡಿಸ್ಕೌಂಟ್‌ಗಳು 90% ತನಕವೂ ಸಿಗುವುದು ಇಲ್ಲಿನ ವಿಶೇಷತೆ.

ಇದನ್ನೂ ಓದಿ: Space Station : 2035ರ ವೇಳೆಗೆ ಭಾರತಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಕೇಂದ್ರ ಸಚಿವ

ಬೆಂಗಳೂರಿನಲ್ಲಿ ಪಟಾಕಿ ಕುರಿತ ನಿಯಮಗಳೇನು?

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ಪ್ರತಿ ವರ್ಷ ಪಟಾಕಿ ಬಿಸಿನೆಸ್‌ ಜೋರಾಗಿ ನಡೆಯುತ್ತದೆ. ಬೆಂಗಳೂರಿನಿಂದ ಕೇವಲ 40 ಕಿಲೋ ಮೀಟರ್‌ ದೂರದಲ್ಲಿರುವುದರಿಂದ ನಗರದ ಜನತೆ ಹೊಸೂರಿಗೆ ಹೋಗಿ ಪಟಾಕಿಗಳನ್ನು ಡಿಸ್ಕೌಂಟ್‌ ದರದಲ್ಲಿ ಖರೀದಿಸುವುದು ಸಾಮಾನ್ಯವಾಗಿದೆ.
ದೀಪಾವಳಿ ಸಂದರ್ಭ ಸುಪ್ರೀಂಕೋರ್ಟ್‌ ನಿರ್ದೇಶನದ ಪ್ರಕಾರ ಹಸಿರು ಪಟಾಕಿಗಳನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ. 25 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಬಳಸುವಂತಿಲ್ಲ. ನಗರದ ನಾನಾ ಬಡಾವಣಿಗಳ ನಿಗದಿತ ಮೈದಾನಗಳಲ್ಲಿ ಮಾತ್ರ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಆನ್‌ಲೈನ್‌ ಮೂಲಕ ನಾನಾ ಬ್ರ್ಯಾಂಡ್‌ಗಳ ಪಟಾಕಿಗಳನ್ನು ಖರೀದಿಸಬಹುದು. ರಾತ್ರಿ 8ರಿಂದ 10ರ ತನಕ ಪಟಾಕಿ ಸಿಡಿಸಲು ಅನುಮತಿ ಇದೆ.

ಪಟಾಕಿಗಳ ಉತ್ಪಾದನೆ, ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನಿರ್ಬಂಧ ವಿಧಿಸಿದ ಬಳಿಕ ಈ ವರ್ಷ ಶಿವಕಾಶಿಯಲ್ಲಿಯೂ ವಹಿವಾಟು ನಿರೀಕ್ಷೆಗೆ ತಕ್ಕಂತೆ ಇಲ್ಲ ಎನ್ನುತ್ತಾರೆ ವರ್ತಕರು. ಸಾಮಾನ್ಯವಾಗಿ ಆಯುಧಪೂಜೆಯಿಂದ ಪಟಾಕಿಗಳಿಗೆ ಬೇಡಿಕೆ ಶುರುವಾಗಿ, ದೀಪಾವಳಿಗೆ ಗಣನೀಯ ಏರಿಕೆಯಾಗುತ್ತದೆ. ಆದರೆ ಈ ಸಲ ಗ್ರಾಹಕರ ಸಂಖ್ಯೆ ಇಳಿದಿದೆ. ಜತೆಗೆ ಆನ್‌ಲೈನ್‌ ಶಾಪಿಂಗ್‌ ಕೂಡ ಪ್ರಭಾವ ಬೀರಿದೆ.